

ಬೀದರ್: ಅತಿವೃಷ್ಟಿಯಿಂದ ಗ್ರಾಮೀಣ ಭಾಗಗಳಲ್ಲಿ ವಿವಿಧ ಸಮಸ್ಯೆಗಳು ಉದ್ಭವಿಸಿವೆ. ಆದ್ಯತೆ ಮೇರೆಗೆ ಪರಿಹರಿಸಲು ಮುಂದಾಗದ ಗ್ರಾಪಂ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಜಿಪಂ ಸಿಇಒಗೆ ಸೂಚಿಸಿದ್ದಾರೆ.
ಅಧಿಕ ಮಳೆಯಿಂದ ಹಳ್ಳ, ಕೆರೆ ಮತ್ತು ಬಾವಿಗಳು ತುಂಬಿವೆ. ರಸ್ತೆಗಳು ಹಾಳಾಗಿದ್ದು, ಅಲ್ಲಲ್ಲಿ ಚರಂಡಿಗಳು ತುಂಬಿಕೊಂಡಿವೆ. ಆದರೂ ಪಿಡಿಒಗಳು ಗಮನಹರಿಸುತ್ತಿಲ್ಲ ಎಂಬ ಬಗ್ಗೆ ದೂರು ಪೆಟ್ಟಿಗೆಗೆ ಅರ್ಜಿಗಳು ಬರುತ್ತಿವೆ. ಕೂಡಲೇ ಎಲ್ಲ ಪಿಡಿಒಗಳು ಸಮಸ್ಯೆ ನಿವಾರಣೆಗೆ ಮುಂದಾಗುವಂತೆ ನೋಡಿಕೊಳ್ಳುವಂತೆ ತಿಳಿಸಿದ್ದಾರೆ.
ಚರಂಡಿ ಶುಚಿಗೊಳಿಸದಿದ್ದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿ ಮಲೇರಿಯಾ, ಡೆಂಘಿಯಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹೀಗಾಗಿ ಈ ವಿಷಯವನ್ನು ಗಂಭೀರ ಪರಿಗಣಿಸಬೇಕು. ಎಲ್ಲೆಡೆ ಕುಡಿಯುವ ನೀರಿನ ಶುದ್ಧಿಗಾಗಿ ಬಾವಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕಬೇಕು. ಎಲ್ಲ ಚರಂಡಿ ಶುಚಿಗೊಳಿಸಿ ಯಾವುದೇ ಗ್ರಾಮದಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಲ್ಲಿ 10-12 ಪಿಡಿಒ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆಯೂ ದೂರುಗಳಿವೆ. ಕೂಡಲೇ ಎಲ್ಲರೂ ಸುಧಾರಿಸಿಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಜನಹಿತದ ದೃಷ್ಟಿಯಿಂದ ಸೇವೆ ಸಲ್ಲಿಸಬೇಕು. ನಿತ್ಯ ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಮೂಲಸೌಕರ್ಯ ಒದಗಿಸುವಲ್ಲಿ ವಿಫಲರಾದಲ್ಲಿ ಮುಲಾಜಿಲ್ಲದೆ ಅಂಥವರನ್ನು ಅಮಾನತು ಮಾಡಬೇಕು ಎಂದು ಹೇಳಿದ್ದಾರೆ.
ಇನ್ನೊಂದು ವಾರ ಕ್ವಾರಂಟೈನ್
ವೈದ್ಯರ ಸಲಹೆ ಮೇರೆಗೆ ಸಚಿವ ಪ್ರಭು ಚವ್ಹಾಣ್ ಇನ್ನೂ ಒಂದು ವಾರ ಹೋಮ್ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ತಿಳಿಸಿದ್ದಾರೆ. ಸಚಿವರಿಗೆ ಕರೊನಾ ದೃಢಪಟ್ಟು, ನಂತರ ವರದಿ ನೆಗೆಟಿವ್ ಬಂದಿದೆ. ಆದರೆ ಪೂರ್ಣಪ್ರಮಾಣದಲ್ಲಿ ಗುಣ ಹೊಂದಿಲ್ಲ. ದೈಹಿಕ ನಿಶಕ್ತತೆ ಇರುವುದರಿಂದ ಇನ್ನೊಂದು ವಾರ ಮನೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಸಾರ್ವಜನಿಕರ ಭೇಟಿಗೆ ಸಚಿವರ ಅಲಭ್ಯ ಇರುವುದರಿಂದ ಸಹಕರಿಸುವಂತೆ ಕೋರಿದ್ದಾರೆ. ಏನಾದರೂ ಅಗತ್ಯ ಕೆಲಸವಿದ್ದರೆ ದೂರವಾಣಿಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.