

ಆಯನೂರು: ಚೋರಡಿ ಗ್ರಾಪಂ ಪಿಡಿಒ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಪಡಿಸಿ ಮಂಗಳವಾರ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು ಮತ್ತು ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಜಾಗ ಒತ್ತುವರಿ ತೆರವು ಮಾಡಲು ಮುಂದಾಗಿದ್ದಾಗ ಅಧಿಕಾರಿಗಳನ್ನು ಹೆದರಿಸಲು ಮಹಿಳೆ ವಿಷ ಸೇವಿಸಿದ್ದಾರೆ. ಪಶು ಆಸ್ಪತ್ರೆ ನಿರ್ಮಿಸುವ ಉದ್ದೇಶದಿಂದ ಒತ್ತುವರಿ ಜಾಗ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಇದರಲ್ಲಿ ಪಿಡಿಒ ತಪ್ಪು ಇಲ್ಲ. ಕೂಡಲೇ ಅವರ ಅಮಾನತು ಆದೇಶ ಹಿಂತೆಗೆದುಕೊಳ್ಳಬೇಕು. ಒತ್ತುವರಿ ಮಾಡಿರುವ ಜಾಗವನ್ನು ಜಿಪಂ ಸಿಇಒ ಮತ್ತು ತಾಪಂ ಇಒ ಅವರೇ ಮುಂದೆ ನಿಂತು ತೆರವು ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.
21 ವರ್ಷಗಳ ಹಿಂದೆಯೇ ಪಶು ಆಸ್ಪತ್ರೆಗೆ ಈ ಜಾಗ ಮೀಸಲಿಡಲಾಗಿದೆ. ಶಾಸಕರು ಪಶು ಆಸ್ಪತ್ರೆ ಕಟ್ಟಡಕ್ಕೆ 40 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಆಸ್ಪತ್ರೆಗೆ ಮೀಸಲಿಟ್ಟ ಜಾಗದಲ್ಲಿ ಅಡಕೆ, ತೆಂಗು ಬೆಳೆಯಲಾಗಿದ್ದು, ಒತ್ತುವರಿ ತೆರವಿಗೆ ಹೋದಾಗ ಕಾರ್ಯಾಚರಣೆಗೆ ಅಡ್ಡಿಪಡಿಸಿ ಅಧಿಕಾರಿಗಳಿಗೆ ತೊಂದರೆ ನೀಡಿದ್ದಾರೆ. ಸಿಇಒ ಅವರು ಸ್ಥಳ ಹಾಗೂ ದಾಖಲಾತಿ ಪರೀಶಿಲನೆ ಮಾಡದೆ ಪಿಡಿಒ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಕೂಡಲೇ ತಾಪಂ ಇಒ ಮತ್ತು ಜಿಪಂ ಸಿಇಒ ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿ ಅರಿಯಬೇಕು ಎಂದು ಆಗ್ರಹಿಸಿದರು.