

ರಾಣೆಬೆನ್ನೂರ: ಪಿಟ್ಸ್ ಕಾಯಿಲೆಗೆ ಬೇಕಾದ ಔಷಧಕ್ಕಾಗಿ ಪರದಾಡುತ್ತಿದ್ದ ಇಲ್ಲಿಯ ರಂಗನಾಥ ನಗರದ ನಿವಾಸಿ ಜ್ಯೋತಿ ಮಡಿವಾಳರ ಅವರ ಮಗ ದೈವಿಕನಿಗೆ ಬ್ಯಾಡಗಿ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಟ್ಟರಾಜ, ಮಣಿಪಾಲ ಆಸ್ಪತ್ರೆಯಿಂದ ಔಷಧ ತರಿಸಿ ನೀಡಿದರು.
ಶಾಸಕ ಅರುಣಕುಮಾರ ಪೂಜಾರ ಹಾಗೂ ವೈದ್ಯರು ಶುಕ್ರವಾರ ಜ್ಯೋತಿ ಮಡಿವಾಳರ ಮನೆಗೆ ಭೇಟಿ ನೀಡಿ, ಔಷಧವನ್ನು ನೀಡಿದರು.
ದೈವಿಕ ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದನು. ಆತನಿಗೆ ಮಣಿಪಾಲ ಆಸ್ಪತ್ರೆ ಚಿಕಿತ್ಸೆ ಕೊಡಿಸಲಾಗಿತ್ತು. ವೈದ್ಯರು ನಿತ್ಯ ಔಷಧ ಸೇವಿಸಲು ಸೂಚಿಸಿದ್ದರು. ಕಳೆದ ವಾರದಿಂದ ಔಷಧ ಖಾಲಿಯಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ದೈವಿಕನ ಕುಟುಂಬದವರು ಔಷಧ ತರಲಾಗದೇ ಪರದಾಡುತ್ತಿದ್ದರು. ತಮ್ಮ ಸಂಕಷ್ಟವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ಕುರಿತು ವಿಜಯವಾಣಿ ಪತ್ರಿಕೆ ಏ. 16ರಂದು ‘ಮಗನ ಔಷಧಕ್ಕೆ ಹೆತ್ತಮ್ಮನ ಗೋಳಾಟ’ ಎಂದು ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ವೈದ್ಯಾಧಿಕಾರಿ ಡಾ. ಪುಟ್ಟರಾಜ, ತಮ್ಮ ಆಸ್ಪತ್ರೆ ಸಿಬ್ಬಂದಿಯನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಔಷಧ ತರಿಸಿಕೊಡುವ ಭರವಸೆ ನೀಡಿದ್ದರು.
ಅದರಂತೆ ಜ್ಯೋತಿ ಮಡಿವಾಳರ ಅವರಿಗೆ ಔಷಧ ತಲುಪಿಸಿದರು. ವೈದ್ಯರ ಕಾರ್ಯವನ್ನು ಶಾಸಕ ಅರುಣಕುಮಾರ ಪೂಜಾರ ಹಾಗೂ ಜ್ಯೋತಿ ಕುಟುಂಬದವರು ಶ್ಲಾಘಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಮತ್ತಿತರರಿದ್ದರು.