ಪಿಟಿಸಿಎಲ್ ಕಾಯ್ದೆಗೆ ವಿರೋಧ

03M.D.R.3
Published on

ಮದ್ದೂರು: ಅನ್ಯಜಾತಿಯವರು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಮುದಾಯಗಳ ಜಮೀನುಗಳನ್ನು ಸರ್ಕಾರದ ಅನುಮತಿ ಪಡೆಯದೇ ಪರಭಾರೆ ಮಾಡಿದರೆ ಮೂಲ ಮಂಜೂರಾತಿದಾರರಿಗೆ ವಾಪಸ್ ಕೊಡಲು ಅವಕಾಶ ಇರುವ ವಿಧೇಯಕ (ಪಿಟಿಸಿಎಲ್)ಅನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಖಂಡನಾ ಸಭೆಯನ್ನು ನಡೆಸಿ, ನಂತರ ಪ್ರತಿಭಟನೆ ನಡೆಸಲಾಯಿತು.


ಖಂಡನಾ ಸಭೆಯ ನೇತೃತ್ವ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ದೇಶಹಳ್ಳಿ ಶಿವಪ್ಪ ಮಾತನಾಡಿ, ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದರು.


ಪರಿಶಿಷ್ಟ ಜಾತಿ ಮತ್ತು ಪಂಗಡದವರಿಂದ ಜಮೀನುಗಳನ್ನು ಒಕ್ಕಲಿಗ ಜನಾಂಗ ಸೇರಿದಂತೆ ಇತರ ಜನಾಂಗದವರು ನ್ಯಾಯಯುತವಾಗಿ ಪಡೆದಿದ್ದು, ಈ ಕಾಯ್ದೆ ಜಾರಿಯಾದರೆ ಅವರೆಲ್ಲರಿಗೂ ಅನ್ಯಾಯವಾಗುತ್ತದೆ. ಹೀಗಾಗಿ ಈ ಕಾಯ್ದೆಯನ್ನು ತಕ್ಷಣವೇ ಸರ್ಕಾರ ಕೈಬಿಡಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಕಾಂಗ್ರೆಸ್ ಪಕ್ಷದಿಂದ 40ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಜನಾಂಗದ ಶಾಸಕರು ಆಯ್ಕೆಯಾಗಿದ್ದು, ಯಾರೊಬ್ಬರೂ ಈ ಬಗ್ಗೆ ಮಾತನಾಡದಿರುವುದು ಬೇಸರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಶಂಕರಯ್ಯ, ಕಾರ್ಯದರ್ಶಿ ಸುರೇಶ್, ಪ್ರೊ.ಕೃಷ್ಣ, ದೊರೆಸ್ವಾಮಿ, ಮಹೇಶ್, ಶಿವಕುಮಾರ್, ಶ್ರೀನಿವಾಸ್, ಸಿದ್ದೇಗೌಡ, ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net