ಪಿಜಿ ಕೋರ್ಸ್ ಪ್ರವೇಶ ಪ್ರಕ್ರಿಯೆ ಪ್ರಾರಂಭ

CUK
Published on

ಕಲಬುರಗಿ: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸ್ನಾತಕೋತ್ತರ ೨೭ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದು, ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (ಸಿಯುಇಟಿ) ಮೂಲಕ ಸೀಟು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಏ.೧೯ ಕೊನೇ ದಿನ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.

ಎಂಎ, ಎಂಕಾA, ಎಂಬಿಎ, ಎಂಎಸ್ಸಿ, ಸಮಾಜ ಕಾರ್ಯ, ಎಂಸಿಎ, ಎಂ.ಟೆಕ್, ಎಲ್‌ಎಲ್‌ಎಂ, ಎಂಇಡಿ, ಎಂಪಿಎ ಸಂಗೀತ ಹಿಂದುಸ್ತಾನಿ ಗಾಯನ, ಹಿಂದುಸ್ತಾನಿ ತಬಲಾ ಸೇರಿ ೨೭ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಶುರುವಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ೨೦ರಂದು ಪ್ರಾರಂಭವಾಗಿದೆ. ಸ್ನಾತಕ (ಯುಜಿ) ಅಂತಿಮ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ www.nta.ac.in ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್‌ನಲ್ಲಿ ನಡೆಸಲಾಗುತ್ತದೆ. ಎಂಟೆಕ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಸಿಯುಇಟಿ ಮೂಲಕ ನಡೆಯಲಿದ್ದು, ಶೇ.೫೦ ಸೀಟು ಸಿಯುಇಟಿ, ಶೇ.೫೦ ಸೀಟು ಜೆಇಇ ಮೂಲಕ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.

ಶುಲ್ಕ ಪಾವತಿಗೆ ಏ.೧೯ ಕೊನೇ ದಿನ. ಅರ್ಜಿ ತಿದ್ದುಪಡಿ ಇದ್ದರೆ ಏ.೨೦ರಿಂದ ೨೪ರವರೆಗೆ ಮಾಡಬಹುದು. ಪ್ರವೇಶ ಕಾರ್ಡ್, ಪರೀಕ್ಷೆ ದಿನಾಂಕ ಕುರಿತು ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು. ಪರೀಕ್ಷೆ ಅವಧಿ ಎರಡು ತಾಸು. ಪ್ರಮುಖ ವೆಬ್‌ಸೈಟ್ www.nta.ac.in ಆಗಿದೆ. ಫಲಿತಾಂಶ ಎನ್‌ಟಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಪ್ರವೇಶ ಪರೀಕ್ಷೆ ಕನ್ನಡವೂ ಸೇರಿ ೧೩ ಭಾಷೆಗಳಲ್ಲಿ ಇರಲಿದೆ ಎಂದರು.

ಅಭ್ಯರ್ಥಿಗಳು ಭವಿಷ್ಯದ ಸಂವಹನಕ್ಕಾಗಿ ಅರ್ಜಿಯಲ್ಲಿ ಸರಿಯಾದ ಇ-ಮೇಲ್ ಮತ್ತು ಫೋನ್, ಮೊಬೈಲ್ ಸಂಖ್ಯೆ ನಮೂದಿಸಬೇಕು. ಎಂ.ಎಸ್ಸಿ ಗಣಿತ, ಭೌತಶಾಸ್ತç, ರಸಾಯನಶಾಸ್ತçದಲ್ಲಿ ಶೇ.೫೦ ಸೀಟು ಸಿಯುಇಟಿ ಮತ್ತು ಶೇ.೫೦ ಜೆಎಎಂ ಮೂಲಕ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಕುಲಸಚಿವ ಡಾ.ಬಸವರಾಜ ಡೋಣೂರು, ಪರೀಕ್ಷಾ ನಿಯಂತ್ರಕ ಡಾ.ಕೋಟಾ ಸಾಯಿಕೃಷ್ಣ, ಪ್ರವೇಶಾತಿ ಸಮಿತಿ ಅಧ್ಯಕ್ಷ ಡಾ.ಕೆ.ಹನುಮೇಗೌಡ, ವಿವಿ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಸಿನ್ನೂರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net