ತುಮಕೂರು: ಪ್ರಯಾಣಿಕರು ಬಸ್ ಹತ್ತುವ ವೇಳೆ ಬಸ್ಸಿನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳಿಯರನ್ನು ಹುಳಿಯಾರು ಠಾಣೆ ಪೊಲೀಸರು ಬಂಧಿಸಿ ಒಟ್ಟು 10.05 ಲಕ್ಷ ರೂ. ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ. ಬಸ್ಗಳಲ್ಲಿ ಪಿಕ್ಪ್ಯಾಕೆಟ್ ಮಾಡುತ್ತಿದ್ದ ಕೊರಟಗೆರೆ ಬೋವಿ ಕಾಲನಿಯ ಅಲುವೇಲಮ್ಮ(25) ಬಂಧಿತ ಆರೋಪಿ. ಈಕೆ ಕಿಬ್ಬನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಪಿಕ್ಪ್ಯಾಕೆಟ್ ನಡೆಸಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಜಿಲ್ಲೆಯಲ್ಲಿ ಸಾಕಷ್ಟು ಕಡೆ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಳು ಎನ್ನಲಾಗಿದೆ. 2024 ಡಿ.9ರಂದು ತಿಪಟೂರು ತಾಲೂಕು ಗೌಡನಕಟ್ಟೆಯ ರಾಜೇಶ್ವರಿ ಅವರು ಸಂಬಂಧಿಕರ ಮಗಳ ನಾಮಕರಣಕ್ಕೆ ಹೊಸದುರ್ಗದ ಮಾಳಪ್ಪನಹಳ್ಳಿಗೆ ಹೋಗಲು ತಿಪಟೂರಿನಿಂದ ಹುಳಿಯಾರಿಗೆ ಬಂದು ಹುಳಿಯಾರಿನಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಮಾಳಪ್ಪನಹಳ್ಳಿಗೆ ಹೋಗಲು ಹುಳಿಯಾರು ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಪಿಕ್ಪ್ಯಾಕೆಟ್ ಮಾಡಿ ಆಭರಣಗಳನ್ನು ಕದ್ದಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಹುಳಿಯಾರು ಠಾಣೆ ಪೊಲೀಸರು ಆರೋಪಿಯನ್ನು ಪತ್ತೆಯಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.