ಪಿಕೆಪಿಎಸ್ ಬಲವರ್ಧನೆಗೆ ನಬಾಡ್೯ ಕ್ರಮ

saharda
Published on

ಬೀದರ್: ಪ್ರಾಥಮಿಕ ಕೃಷಿ ಸಹಕಾರ ಸಂಘ(ಪಿಕೆಪಿಎಸ್)ಗಳು ರೈತರಿಗೆ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಅರ್ಥ ವ್ಯವಸ್ಥೆಗೆ ಸದೃಢಗೊಳಿಸುವಲ್ಲಿ ಹಾಗೂ ಸಮಾಜದಲ್ಲಿ ಆರ್ಥಿಕ ಸಮಾನತೆ ತರುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಬೆಂಗಳೂರಿನ ನಬಾಡ್೯ ಸಹಾಯಕ ಮಹಾ ಪ್ರಬಂಧಕ ರೋನಿ ರಾಜು ಹೇಳಿದರು.

ಇಲ್ಲಿಯ ಡಿಸಿಸಿ ಬ್ಯಾಂಕ್‌ನ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಚಿಕ್ಕಮಗಳೂರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ ಮೂರು ದಿನದ ತರಬೇತಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 96540 ಪಿಕೆಪಿಎಸ್ ಗಳಿದ್ದು 14 ಕೋಟಿ ಸದಸ್ಯರ ಬಂಡವಾಳದೊಂದಿಗೆ ಗ್ರಾಮೀಣ ರೈತರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಿವೆ ಎಂದರು.

ಬದಲಾದ ಪರಿಸ್ಥಿತಿಗೆ ತಕ್ಕಂತೆ ಸಹಕಾರ ಕ್ಷೇತ್ರ ಸಹ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದು, ಪಿಕೆಪಿಎಸ್ ಗಳು ಕಂಪ್ಯೂಟರೀಕೃತ ವ್ಯವಹಾರ ನಡೆಸುತ್ತಿವೆ. ಪ್ರಧಾನಮಂತ್ರಿಯವರ ಆಶಯದಂತೆ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಮತ್ತು ಸ್ಥಳೀಯ ಆರ್ಥಿಕತೆಗೆ ಬಲ ತುಂಬುವಲ್ಲಿ ತೊಡಗಿವೆ. ಪಿಕೆಪಿಎಸ್ ಸುಧಾರಣೆ, ಬಲವರ್ಧನೆಗೆ ನಬಾಡ್೯ ಯೋಜನೆ ಜಾರಿಗೊಳಿಸುತ್ತಿದೆ. ಕಂಪ್ಯೂಟರೀಕರಣಕ್ಕಾಗಿ ಶೇ.50ರಷ್ಟು ಅನುದಾನ ಮತ್ತು ಸ್ವಂತ ಕಟ್ಟಡ ನಿರ್ಮಾಣ, ವ್ಯಾಪಾರಿ ಮಳಿಗೆಗಳ ಗೋಡೌನ್, ಶಿಥಲಿಕರಣಾಗರ ನಿರ್ಮಿಸಲು ಸಹಾಯಧನದೊಂದಿಗೆ ಸಾಲ ನೀಡುತ್ತಿವೆ ಎಂದು ವಿವರಿಸಿದರು.

ಡಿಸಿಸಿ ಬ್ಯಾಂಕ್ ಜಿಎಂ ವಿಠಲರೆಡ್ಡಿ ಯಡಮಲ್ಲೆ ಮಾತನಾಡಿ, ಸಹಕಾರಿ ಸಂಘಗಳು ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸಿ ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳಿಗೆ, ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಲ ನೀಡುವ ಮೂಲಕ ವ್ಯವಹಾರ ಹೆಚ್ಚಿಸಿಕೊಳ್ಳಬೇಕು. ಕೇವಲ ಕೃಷಿ ಸಾಲ ನೀಡುವ ಮೇಲೆ ಅವಲಂಬಿತರಾಗದೆ ಸ್ವಂತ ಬಂಡವಾಳ ಕ್ರೋಢೀಕರಣಕ್ಕೆ ಆದ್ಯತೆ ನೀಡಬೇಕು ಎಂದರು.

ಡಿಸಿಸಿ ಬ್ಯಾಂಕ್ ಸಿಇಒ ಮಹಾಜನ ಮಲ್ಲಿಕಾರ್ಜುನ ಮಾತನಾಡಿದರು. ನಬಾಡ್೯ ಅಧಿಕಾರಿ ಮನೀಶಕುಮಾರ, ಎಸ್.ಜಿ.ಪಾಟೀಲ್ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಮಹಾಲಿಂಗ ನಿರೂಪಣೆ ಮಾಡಿದರು. ಅನೀಲ ಪರಶೆಣ್ಣೆ ವಂದಿಸಿದರು.

ಸಹಕಾರ ಸಂಘಗಳು ರೈತರಿಗೆ ಬೆಳೆ ಸಾಲ, ಮಧ್ಯಮಾವಧಿ ಸಾಲ ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಆರೋಗ್ಯ ಮತ್ತು ಅಪಘಾತ ವಿಮೆ ಸೌಲಭ್ಯಗಳ ಜತೆಗೆ ವಿವಿಧ ಉತ್ಪನ್ನಗಳ ಖರೀದಿ ಮಾರಾಟ ಮಾರುಕಟ್ಟೆ ವಿಸ್ತರಣೆಗಳನ್ನು ಮೈಗೂಡಿಸಿಕೊಂಡು ಸಶಕ್ತರಾಗಿ ಬೆಳೆಯಬೇಕು.| ರೋನಿ ರಾಜುನಬಾಡ್೯ ಎಜಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net