

ಸಿರಗುಪ್ಪ: ರೈತರು ಹಾಗೂ ವ್ಯಾಪಾರಿಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಸೌಲಭ್ಯ ನೀಡಿರುವ ಬ್ಯಾಂಕಿನ ಕಾರ್ಯ ಉತ್ತಮವಾಗಿದೆ ಎಂದು ಜರ್ಮನಿ ಸರ್ಕಾರದ ಕೆ.ಎಫ್.ಡಬ್ಲುೃ ಬ್ಯಾಂಕಿನ ಯೋಜನಾ ವ್ಯವಸ್ಥಾಪಕಿ ತೇರಿಸಾ ಹೇಳಿದರು.
ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಏತ ನೀರಾವರಿ ಯೋಜನೆ ಘಟಕ ಪರಿಶೀಲಿಸಿ ಶುಕ್ರವಾರ ಮಾತನಾಡಿದರು. ನಬಾರ್ಡ್ ಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆದು ಯಶಸ್ವಿಯಾಗಿರುವ ಭಾರತದ ವಿವಿಧ ರಾಜ್ಯಗಳಲ್ಲಿನ ಸಹಕಾರಿ ಮತ್ತು ಸಂಘ-ಸಂಸ್ಥೆಗಳ ಯೋಜನೆ ಕುರಿತು ಮಾಹಿತಿ ಸಂಗ್ರಹಿಸಿ ನಮ್ಮ ಬ್ಯಾಂಕಿನಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಮಾತನಾಡಿ, ನಮ್ಮ ಬ್ಯಾಂಕ್ 2014ರಲ್ಲಿ ನಬಾರ್ಡ್‌ನಿಂದ ಸಾಲ ಪಡೆದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಸಾರ್ವಜನಿಕರಿಗೆ ಒದಗಿಸಿದೆ. ನಮ್ಮ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ಅತಿ ಹೆಚ್ಚು ಲಾಭ ಪಡೆಯಲು ಸಾಧ್ಯವಾಯಿತು. ರೈತರಿಗೆ ಏತ ನೀರಾವರಿ ಸೌಲಭ್ಯ ಕಲ್ಪಿಸಿದ್ದರಿಂದ ರಾಜ್ಯದಲ್ಲಿ ಉತ್ತಮ ಬ್ಯಾಂಕ್ ಪ್ರಶಸ್ತಿ ಬರಲು ಕಾರಣವಾಯಿತು ಎಂದು ಮಾಹಿತಿ ನೀಡಿದರು.
ಏತ ನೀರಾವರಿ ಯೋಜನೆ ಅಳವಡಿಸಿಕೊಂಡ ರೈತರಿಗೆ ವಿದ್ಯುತ್ ಸಮಸ್ಯೆಯಾಗದಂತೆ ಸೋಲಾರ್ ವಿದ್ಯುತ್ ಘಟಕ ಅವಳಡಿಕೆ ಯೋಜನೆ ರೂಪಿಸಲಾಗಿದೆ. ಸಾಂಪ್ರದಾಯಿಕ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಉತ್ತಮ ಇಳುವರಿ ಪಡೆಯುವ ಕಾರ್ಯವನ್ನು ರೈತರಿಗೆ ಮನದಟ್ಟ ಮಾಡಲಾಗಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಿ, ಉತ್ತಮ ಮಾರುಕಟ್ಟೆ ಕಲ್ಪಿಸುವ ತಯಾರಿ ನಡೆಸಲಾಗಿದೆ. ರೈತರ ಏಳಿಗೆಯೆ ನಮ್ಮ ಧ್ಯೇಯವಾಗಿದೆ ಎಂದು ಚೊಕ್ಕಬಸವನಗೌಡ ತಿಳಿಸಿದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕಾಸ್ಕರ್ಡ್ ಬ್ಯಾಂಕ್ ವ್ಯವಸ್ಥಾಪಕ ಸಿ.ಮಂಜುನಾಥ, ಜಿಲ್ಲಾ ನಬಾರ್ಡ್ ಡಿಡಿಎಂ ಯುವರಾಜ, ನಬಾರ್ಡ್ ಆರ್.ಒ. ಪ್ರಸನ್ನ, ಪಿಕಾರ್ಡ್ ಬ್ಯಾಂಕ್ ಸಿಬ್ಬಂದಿ ಇದ್ದರು.