

ಹಾಸನ: ಪಿಒಪಿ ಗಣೇಶ ಮೂರ್ತಿ ಮಾರಾಟ ಹಾಗು ಪ್ರತಿಷ್ಟಾಪನೆ ನಿಷೇಧಿಸಿದ್ದು, ಯಾರಾದರೂ ನಿಯಮ ಮೀರಿದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ನಗರಸಭೆ ಆಯುಕ್ತ ನರಸಿಂಹಮೂರ್ತಿ ಅವರು ಎಚ್ಚರಿಕೆ ನೀಡಿದರು.
ನಗರಸಭೆ ಕುವೆಂಪು ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಗಣೇಶ ಮೂರ್ತಿ ವ್ಯಾಪಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಸೂಚನೆ ನೀಡಲಾಗಿದೆ. ಪಿಒಪಿ ಗಣೇಶ ಮೂರ್ತಿ ಬಳಸದಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದಾಗ್ಯೂ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಖಚಿತ ಎಂದರು.
ಹಸಿರು ಪಟಾಕಿ ಬಳಕೆಯು ಸಾರ್ವಜನಿಕರ ಜವಾಬ್ದಾರಿ. ಪಿಒಪಿ ಮೂರ್ತಿ ತಯಾರಿಕೆ, ಮಾರಾಟ, ನಿಷಿದ್ಧ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಟಾಪಿಸುವವರು ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗೌರಿ-ಗಣೇಶ ಮೂರ್ತಿ ವಿಸರ್ಜನೆಗೆ ತಾತ್ಕಾಲಿಕವಾಗಿ ನಗರಸಭೆಯಿಂದ ನೀರು ತುಂಬಿದ ಟ್ರ್ಯಾಕ್ಟರ್‌ಗಳ ವ್ಯವಸ್ಥೆ ಮತ್ತು ತಾತ್ಕಾಲಿಕ ಗುಂಡಿಗಳ ತೆರೆದಿದ್ದು ಅದರ ಸದುಪಯೋಗ ಪಡೆಯಬೇಕು ಎಂದರು.
ಚಿಕ್ಕ ಮೂರ್ತಿಗಳ ವಿಸರ್ಜನೆಗೆ ನಗರದ ವಿವಿಧೆಡೆ ಟ್ರ್ಯಾಕ್ಟರ್‌ಗಳ ವ್ಯವಸ್ಥೆ ಮಾಡಿದ್ದು ಅದರ ವಿವರ ಇಲ್ಲಿದೆ. ಮಿನಿ ವಿಧಾನ ಸೌಧ, ಕುವೆಂಪು ನಗರ ಗಣಪತಿ ದೇವಸ್ಥಾನದ ಸಮೀಪ, ಸಾಲಗಾಮೆ ರಸ್ತೆ ಅರಳೀಕಟ್ಟೆ, ಬಸವೇಶ್ವರ ಕಲ್ಯಾಣ ಮಂಟಪ, ಶಂಕರಮಠ, ಕರೀಗೌಡ ಕಾಲೋನಿ ಯುನೈಟೆಡ್ ಶಾಲೆ ಸಮೀಪ, ಹಾಸನಾಂಬ ವೃತ್ತದ ಬಳಿ (ಮೂರು ಟ್ರ್ಯಾಕ್ಟರ್), ದೇವಿಗೆರೆ ವೃತ್ತ, ತಣ್ಣೀರುಹಳ್ಳ ವೃತ್ತ, ಆದಿಚುಂಚನಗಿರಿ ಕಲ್ಯಾಣ ಮಂಟಪ, ಆಡುವಳ್ಳಿ ಅರಳಿ ಮರದ ಮುಂಭಾಗ, ಪೃಥ್ವಿ ಚಿತ್ರ ಮಂದಿರ ಹಾಗು ಸ್ಕೌಟ್ ಅಂಡ್ ಗೈಡ್ ಭವನದ ಸಮೀಪ, ಕೆ.ಆರ್.ಪುರಂ ಮಲ್ಲಿಗೆ ಹೋಟೆಲ್ ಸಮೀಪದ ಮೈದಾನ, ಹೇಮಾವತಿ ನಗರ ಶಾಸಕ ಹೆಚ್.ಪಿ.ಸ್ವರೂಪ್ ಮನೆ ಸಮೀಪ, ಆಕಾಶವಾಣಿ ಸಮೀಪ, ಸಿದ್ದಯ್ಯ ನಗರ, ಎಂ.ಜಿ.ರಸ್ತೆಯ ಡಾಂಗೆ ಕಣ್ಣಿನ ಆಸ್ಪತ್ರೆ ಸಮೀಪ ಗಣೇಶ ಮೂರ್ತಿ ಪ್ರತಿಷ್ಟಾಪನೆಯಾದ ದಿನ ಸಂಜೆ ಈ ನಿಗದಿತ ಸ್ಥಳಗಳಲ್ಲಿ ಟ್ರ್ಯಾಕ್ಟರ್ ಗಳು ಬಂದು ನಿಲ್ಲಲಿವೆ.
ಜೊತೆಗೆ ಗಣೇಶ ವಿಸರ್ಜನೆ ಮಾಡಲು ತಾತ್ಕಾಲಿಕ ಗುಂಡಿಗಳನ್ನು ನಗರಸಭೆಯ ವಸ್ತು ಪ್ರದರ್ಶನ ಆವರಣ, ಮಹಾರಾಜ ಉದ್ಯಾನವನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ನಗರಸಭೆ ಪರಿಸರ ಇಂಜಿನೀಯರ್ ವೆಂಕಟೇಶ್, ಪ್ರಸಾದ್, ಮಂಜುನಾಥ್, ಆನಂದ್ ಇತರರಿದ್ದರು.