ಪಿಒಪಿ ಎತ್ತುಗಳ ಮಾರಾಟ ಜೋರು

Sales of POP bulls are strong
Sales of POP bulls are strong
Published on

ಗುಳೇದಗುಡ್ಡ: ಮಣ್ಣಿನ ಅಮಾವಾಸ್ಯೆ ಹಿನ್ನ್ನೆಲೆಯಲ್ಲಿ ಬುಧವಾರ ನಗರದ ವಿವಿಧೆಡೆ ಮಣ್ಣೆತ್ತುಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಆದರೆ, ಕುಂಬಾರರು ಮಣ್ಣಿನಿಂದ ತಯಾರಿಸಿದ ಬಣ್ಣರಹಿತ ಎತ್ತುಗಳಿಗಿಂತ ಬಣ್ಣಗಳ ಪಿಒಪಿ ಎತ್ತುಗಳ ಮಾರಾಟ ಜೋರಾಗಿತ್ತು.

ನಂದಿ ರೂಪವಾಗಿರುವ ಎತ್ತುಗಳನ್ನು ಮಣ್ಣಿನಲ್ಲಿ ತಯಾರಿಸಿ ಪೂಜಿಸುವ ಪದ್ಧತಿ ಉತ್ತರ ಕರ್ನಾಟಕ ಭಾಗದಲ್ಲಿದೆ. ಮಳೆ, ಬೆಳೆ ಸಮೃದ್ಧಿಯಿಂದ ಕೂಡಿರಲಿ ಎಂದು ಪ್ರಾರ್ಥಿಸಿ ಎತ್ತುಗಳನ್ನು ಪೂಜಿಸಲಾಗುತ್ತದೆ. ಆದರೆ, ಕಾಲ ಬದಲಾದಂತೆ ಮಣ್ಣಿನ ಎತ್ತುಗಳ ಬದಲಾಗಿ ಬಣ್ಣ ಬಣ್ಣದ ಆಕರ್ಷಕ ಪಿಒಪಿ ಎತ್ತುಗಳು ಜನರನ್ನು ಆಕರ್ಷಿಸುತ್ತಿವೆ.

ಮಣ್ಣೆತ್ತುಗಳು 30 ರೂ., 50 ರೂ., 80 ರೂ., 100 ರೂಪಾಯಿಗಳಲ್ಲಿ ದೊರೆತರೆ, ಪಿಒಪಿ ಎತ್ತುಗಳು 100 ರೂ., 200 ರೂ., 300 ರೂ., 500 ರೂ.ವರೆಗೂ ಮಾರಾಟವಾಗುತ್ತಿವೆ. ಆದರೂ ಜನರು ಅಧಿಕ ಬೆಲೆಯ ಪಿಒಪಿ ಎತ್ತುಗಳನ್ನು ಖರೀದಿಸಿದರು. ಇದರಿಂದಾಗಿ ಮಣ್ಣೆತ್ತುಗಳ ಮಾರಾಟ ಕಡಿಮೆಯಾಗಿ ಕುಂಬಾರರು ತಯಾರಿಸಿದ ಸಾಕಷ್ಟು ಮಣ್ಣೆತ್ತುಗಳು ಸಂಜೆಯಾದರೂ ಮಾರಾಟವಾಗದೆ ಉಳಿದಿರುವುದು ಕಂಡುಬಂತು.

ಮಣ್ಣೆತ್ತಿನ ಅಮಾವಾಸ್ಯೆಯಿಂದ ಮಣ್ಣು ಪೂಜೆ ಪ್ರಾರಂಭಗೊಂಡು ಗುಳ್ಳವ್ವ, ನಾಗರಪೂಜೆ, ಗಣೇಶ, ಸಿಗವ್ವ ಹಾಗೂ ಗೌರಿ ಮೂರ್ತಿ ಮೂಲಕ ಮಣ್ಣಿನ ಪೂಜೆ ನಡೆಯುತ್ತದೆ. ಆದರೆ, ಈಗ ಮಣ್ಣಿನ ಎತ್ತುಗಳ ಬದಲಾಗಿ ಪಿಒಪಿ ಎತ್ತುಗಳು, ಮಣ್ಣಿನ ಗಣೇಶನ ಬದಲಾಗಿ ಪಿಒಪಿ ಗಣೇಶ ಮೂರ್ತಿಗಳು ಮಾರಾಟವಾಗುತ್ತಿದ್ದು, ಇದರಿಂದ ಪರಿಸರಕ್ಕೆ ಮಾರಕವಾಗಿದೆ. ಪಿಒಪಿ ಗಣೇಶ ಮೂರ್ತಿಗಳನ್ನು ಸರ್ಕಾರ ನಿಷೇಧಿಸಿದೆ. ಆದರೆ ಪಿಒಪಿ ಮಣ್ಣೆತ್ತುಗಳಿಗೆ ಅದು ಅನ್ವಯವಾಗುತ್ತಿಲ್ಲ. ಜನರು ಈಗಲಾದರೂ ಎಚ್ಚೆತ್ತುಕೊಂಡು ಮಣ್ಣಿನಿಂದ ತಯಾರಿಸಿದ ಬಣ್ಣರಹಿತ ಎತ್ತುಗಳನ್ನು ಖರೀದಿಸಿ, ಪೂಜಿಸಬೇಕು ಎನ್ನುವುದು ಪರಿಸರ ಪ್ರಿಯರ ಕಳಕಳಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net