

ಕೋಲಾರ : ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬೆರಳು ಮುದ್ರೆ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ನಗರದ ವಂದೇ ಮಾತರಂ ಎನ್.ಸೋಮಶೇಖರ್ ಅವರ ಸೇವಾ ದಕ್ಷತೆ, ಪ್ರಾಮಾಣಿಕತೆ ಹಾಗೂ ನಿಷ್ಠೆ ಗುರುತಿಸಿ ಗುರುವಾರ ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಯಿತು.
ಕರೊನಾ ನಿಯಮಾನುಸಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ ಪದಕ ಪ್ರದಾನ ಮಾಡಿದರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಜಿಪಿ ಪ್ರಣಾಬ್ ಮೋಹಂತಿ ಸೇರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾವಹಿಸಿದ್ದರು.
ಸೋಮಶೇಖರ್ ತಾಯಿ ರತ್ಮಮ್ಮ ಅವರೊಂದಿಗೆ ತೆರಳಿ ಪದಕ ಸ್ವೀಕರಿಸಿದರು. ದೇಶದ ಮೇಲಿನ ಅಪಾರ ಪ್ರೀತಿ ಮತ್ತು ಗೌರವದಿಂದ ವಂದೇಮಾತರಂ ಎಂಬ ಹೆಸರಿನಿಂದ ಖ್ಯಾತಿ ಗಳಿಸಿರುವ ಸೋಮಶೇಖರ್ ಪೊಲೀಸ್ ಇಲಾಖೆ ಬಗ್ಗೆ ಜನತೆಯಲ್ಲಿ ವಿಶ್ವಾಸ, ನಂಬಿಕೆ ಬರುವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ.
1994ರ ಅ.5ರಂದು ಇಲಾಖೆಗೆ ಸೇರಿದ ಇವರು 1996ರಿಂದ ಬೆರಳು ಮುದ್ರೆ ಘಟಕದಲ್ಲಿ ಪಿಎಸ್‌ಐ (ಪ್ರಭಾರ) ಆಗಿ ದ್ದಾರೆ. ದೆಹಲಿಯಲ್ಲಿ ಅಖಿಲ ಭಾರತ ಬೋರ್ಡ್ ಎಕ್ಸಾಮಿನೇಷನ್ ನಡೆಸಿದ ಪರೀಕ್ಷೆಯಲ್ಲಿ 3ನೇ ಸ್ಥಾನ ಪಡೆದು 46ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವೈಜ್ಞಾನಿಕವಾಗಿ ಅಪರಾಧ ಪತ್ತೆ ಮಾಡುವ ವಿಷಯದಲ್ಲಿ ರಾಜ್ಯಕ್ಕೆ ಟ್ರೋಫಿ ತಂದುಕೊಟ್ಟಿದ್ದಾರೆ.
54 ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ವೈಜ್ಞಾನಿಕವಾಗಿ ಅಪರಾಧ ಪ್ರಕರಣ ಪತ್ತೆ ಮಾಡಲು ಪ್ರತಿನಿಧಿಸಿದ್ದ ಪೊಲೀಸರ ತಂಡಕ್ಕೆ ತರಬೇತುದಾರರಾಗಿ ಕೆಲಸ ನಿರ್ವಹಿಸಿ ಕಂಚಿನ ಪದಕ ಗೆಲ್ಲುವುದಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಈವರೆಗೆ 200ಕ್ಕೂ ಹೆಚ್ಚು ಕಳ್ಳತನ, ದರೋಡೆ, ಕೊಲೆ ಪ್ರಕರಣಗಳಲ್ಲಿ ಬೆರಳು ಮುದ್ರೆ ಪರೀಕ್ಷೆಯಡಿ ಅಪರಾಧಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಿ ಸುಮಾರು 175 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಲು ಶ್ರಮಿಸಿದ್ದಾರೆ. ಆರೋಪಿಗಳನ್ನು ವೈಜ್ಞಾನಿಕ ಪದ್ಧತಿ ಮೂಲಕ ಪತ್ತೆ ಹಚ್ಚಲು ಇಲಾಖೆಗೆ ನೆರವು ನೀಡಿ ಗೌರವ ಸಂಪಾದಿಸಿದ್ದಾರೆ. ಮಾಲೂರಿನಲ್ಲಿ ಗೌರಮ್ಮ ಎಂಬುವರ ಮನೆಯಲ್ಲಿ 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದ್ದಾಗ ಕೇವಲ 3 ಗಂಟೆಯೊಳಗೆ ಆರೋಪಿಯ ಬೆರಳು ಮುದ್ರೆ ಆಧರಿಸಿ ಆರೋಪಿ ಬಂಧನಕ್ಕೆ ನೆರವಾಗಿದ್ದಾರೆ. ಜನಾನುರಾಗಿಯಾಗಿರುವ ಸೋಮಶೇಖರ್‌ಗೆ ರಾಷ್ಟ್ರಪತಿ ಪದಕ ದೊರೆತಿರುವುದಕ್ಕೆ ಜನ ಸಂತಸ ವ್ಯಕ್ತಪಡಿಸಿದ್ದಾರೆ.