

ಹುಬ್ಬಳ್ಳಿ: ‘ನಾನು ಕರ್ನಾಟಕ ಯುವ ರಕ್ಷಣಾ ವೇದಿಕೆ ಅಧ್ಯಕ್ಷನಿದ್ದೇನೆ. ನನ್ನ ಅಣ್ಣನ ಗಾಡಿಯನ್ನು ದಂಡ ವಿಧಿಸದೇ ಬಿಡಬೇಕು’ ಎಂದು ಪಿಎಸ್ಐಗೆ ಆವಾಜ್ ಹಾಕಿ, ದಂಡ ವಿಧಿಸುವ ಬ್ಲಾಕ್ಬೆರಿ ಮಷಿನ್ ಕಿತ್ತುಕೊಂಡಿದ್ದ ಆರೋಪದಡಿ ಇಬ್ಬರನ್ನು ಕೇಶ್ವಾಪುರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸುಳ್ಳ ರಸ್ತೆ ಬಸವೇಶ್ವರ ಪಾರ್ಕ್ನ ಸುನೀಲ ಚಂದ್ರಶೇಖರ ಶೆಲವಡಿ, ಪುನೀತಕುಮಾರ ಚಂದ್ರಶೇಖರ ಶೆಲವಡಿ ಬಂಧಿತರು. ಮೇ 23ರಂದು ಪೂರ್ವ ಸಂಚಾರ ಠಾಣೆ ಪಿಎಸ್ಐ ಎಸ್.ಎಸ್. ದೇಸಾಯಿ ಕ್ಲಬ್ ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸಿದ್ದರು. ಹೆಲ್ಮೆಟ್ ಧರಿಸದೇ ಹೊರಟಿದ್ದ ಸುನೀಲನನ್ನು ತಡೆದು ದಾಖಲಾತಿ ಕೇಳಿದಾಗ ಸಹೋದರ ಪುನೀತಕುಮಾರನನ್ನು ಕರೆಸಿಕೊಂಡಿದ್ದ. ಆತ ಪಿಎಸ್ಐ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೋಸ ಹೋದವರಿದ್ದರೆ ತಿಳಿಸಿ: ಆರೋಪಿಗಳು ಕರ್ನಾಟಕ ಯುವ ರಕ್ಷಣಾ ವೇದಿಕೆ ಹೆಸರು ಹೇಳಿ ಜನರಿಗೆ ಬೆದರಿಸಿ, ಮೋಸ ಮಾಡುವ ಪ್ರವೃತ್ತಿಯವರು ಎಂದು ತಿಳಿದು ಬಂದಿದ್ದು, ಯಾರಾದರೂ ಮೋಸ ಹೋದವರಿದ್ದರೆ ಕೂಡಲೆ ಕೇಶ್ವಾಪುರ ಪೊಲೀಸ್ ಠಾಣೆ (ದೂ.ಸಂ. 0836- 2233518) ಸಂರ್ಪಸುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.