ಪಿಎಸ್‌ಟಿ, ಜಿಪಿಟಿ ವೃಂದ ವಿಲೀನಗೊಳಿಸಿ

18
Published on

ಮೈಸೂರು: ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ (2017ರ ಸಿ ಆ್ಯಂಡ್ ಆರ್) ನಿಯಮಾವಳಿ ರದ್ದುಗೊಳಿಸಬೇಕು, ಜಿಪಿಟಿ ವೃಂದಕ್ಕೆ ಬಡ್ತಿ ನೀಡಿ ವಿಲೀನಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರು ಒತ್ತಾಯಿಸಿದರು.


ಮೈಸೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಮೈಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಮಾವೇಶಗೊಂಡ ನೂರಾರು ಪ್ರಾಥಮಿಕ ಶಾಲಾ ಶಿಕ್ಷಕರು ಪಿ.ಎಸ್.ಟಿ. ಶಿಕ್ಷಕರ ಹಕ್ಕೊತ್ತಾಯ ಸಭೆ ನಡೆಸಿದರು.


ಬಳಿಕ ಬಿಇಒ ಎಂ.ವಿವೇಕಾನಂದ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನ್ಯಾಯಯುತ ಬೇಡಿಕೆಯನ್ನು ಶೀಘ್ರವೇ ಬಗೆಹರಿಸಬೇಕು ಎಂದು ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಆಗ್ರಹಿಸಿದರು.


ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ರಘು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‌ಟಿ) ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (ಜಿಪಿಟಿ) ಎಂಬ ವೃಂದಗಳನ್ನು ರದ್ದು ಮಾಡಬೇಕು. ಮೊದಲಿನಂತೆ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಒಂದೇ ವೃಂದ ಇರಬೇಕು. ಈ ಪ್ರಾಥಮಿಕ ಶಿಕ್ಷಕರಲ್ಲಿ ಬಿ.ಇಡಿ. ಪದವಿ ಪಡೆದವರಿಗೆ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ನೀಡಬೇಕು, ಇಲ್ಲದಿದ್ದರೆ 6 ಮತ್ತು 7ನೇ ತರಗತಿಗಳ ಬೋಧನೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮಹದೇವ್ ಮಾತನಾಡಿ, ಸಿ ಆ್ಯಂಡ್ ಆರ್ ತಿದ್ದುಪಡಿಯಿಂದ 1ರಿಂದ 7ನೇ ತರಗತಿ ಬೋಧಿಸುತ್ತಿದ್ದ ಶಿಕ್ಷಕರಿಗೆ 1ರಿಂದ 5ನೇ ತರಗತಿಗೆ ಬೋಧಿಸುವಂತೆ ಹಿಂಬಡ್ತಿ ನೀಡಿ ಅನ್ಯಾಯ ಮಾಡಲಾಗಿದೆ. ಮುಂದೆ ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಪಾಠ ಮಾಡಬೇಕಾಗುತ್ತದೆ. ಈ ಅನ್ಯಾಯದ ಬಗ್ಗೆ ಹೋರಾಟ ಅನಿವಾರ್ಯವಾಗಿದೆ ಎಂದರು.


ಶಿಕ್ಷಕ ಸಂತೋಷ್ ಬಿ.ಶೆಟ್ಟಿ ಮಾತನಾಡಿ, ಶಿಕ್ಷಕರಿಗೆ ಆಗಿರುವ ಹಿಂಬಡ್ತಿಯ ಅನ್ಯಾಯ ಮತ್ತು ಮುಂಬಡ್ತಿ ನೀಡದಿರುವ ಬಗ್ಗೆ ಸೂಕ್ತ ದಾಖಲೆಗಳ ಸಹಿತ ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರ ಮನವಿ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿವೇಕಾನಂದ, ಬೇಡಿಕೆಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅದಕ್ಕಾಗಿ ಕಚೇರಿಯಿಂದ ಪತ್ರ ಬರೆಯಲಾಗುವುದು ಎಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷೆ ಮಮತಾ, ಸಂಘಟನಾ ಕಾರ್ಯದರ್ಶಿ ಪಿ. ಶಾಂತರಾಜು, ತಾಲೂಕು ಸಂಘದ ಗೌರವಾಧ್ಯಕ್ಷ ಜೆ.ಜಿ.ಸತೀಶ್, ಉಪಾಧ್ಯಕ್ಷೆ ಎಚ್.ಎ.ಸುಮತಿ, ಖಜಾಂಚಿ ವೆಂಕಟೇಶ್, ಪದಾಧಿಕಾರಿಗಳಾದ ಟಿ.ಕೆ. ಕೆಂಚೇಗೌಡ, ಅನಿಲ್‌ಕುಮಾರ್, ಶಿವಪ್ಪ, ಕುಮಾರ್ ಸೇರಿದಂತೆ ನೂರಾರು ಶಿಕ್ಷಕ ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net