ಪಿಎಸ್ ಐ 371 ಜೆ ಅನ್ಯಾಯ ಖಂಡಿಸಿ ಬೃಹತ್ ಪ್ರತಿಭಟನೆ

IMG20220203110125_01
Published on

ಕಲಬುರಗಿ: ಇತ್ತೀಚೆಗೆ ಬಿಡುಗಡೆಯಾದ 545 ಪಿಎಸ್ ಐ ಹುದ್ದೆಗಳ ತಾತ್ಕಾಲಿಕ ಆಯ್ಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಆಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ 371 (ಜೆ) ಅಡಿ 2016ರಲ್ಲಿ ಹೊರಡಿಸಿದ ಸುತ್ತೋಲೆಯಂತೆ ಮೀಸಲಾತಿ ನೀಡಬೇಕಿತ್ತು. ಪಿಎಸ್ ಐ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ರಾಜ್ಯ ವ್ಯಾಪ್ತಿ ಪಟ್ಟಿಯಲ್ಲಿ ಪರಿಗಣಿಸಿ, ಉಳಿದ ಅಭ್ಯರ್ಥಿಗಳನ್ನು 371(ಜೆ) ಅಡಿ ಸೀಮಿತಗೊಳಿಸಿ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ, ಅತಿ ಹೆಚ್ಚು ಅಂಕ ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಮೇರಿಟ್ ಆಧರಿಸಿ ರಾಜ್ಯ ಪಟ್ಟಿಯಲ್ಲಿ ಪ್ರಕಟಿಸದೇ, ಎಲ್ಲರನ್ನೂ 371 (ಜೆ) ಅಡಿಯೇ ಸೀಮಿತಗೊಳಿಸಿರುವುದು ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾ ನಿರತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಈಗಿನ ತಾತ್ಕಾಲಿಕ ಆಯ್ಕೆಯನ್ನು ರದ್ದು ಪಡಿಸಿ, ನಿಯಮದಂತೆ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ‌ ಮೂಲಕ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net