

ಚನ್ನರಾಯಪಟ್ಟಣ: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆಯಾದರು.
ಕಸಬಾ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಸಿ.ಎನ್.ವಾಸು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆಯನ್ನು ನಿಗದಿಗೊಳಿಸಲಾಗಿತ್ತು. ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಜೆಡಿಎಸ್ ಬೆಂಬಲಿತರಾಗಿ ಸುರೇಶ್ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಮಾರೇನಹಳ್ಳಿ ರಾಕೇಶ್ ನಾಮಪತ್ರ ಸಲ್ಲಿಸಿದ್ದರು.
ಇಬ್ಬರ ನಡುವೆ ನಡೆದ ಚುನಾವಣೆಯಲ್ಲಿ ಸುರೇಶ್ ಅವರಿಗೆ 8 ಮತಗಳು ಲಭಿಸಿದರೆ, ರಾಕೇಶ್ 4 ಮತಗಳನ್ನು ಪಡೆದರು. ಚುನಾವಣಾಧಿಕಾರಿ ಸಿಡಿಪಿಒ ವಿ.ಸುನೀಲ್ ಅವರು ಸುರೇಶ್ ಬಾಳೆಮಂಡಿ ಅವರ ಗೆಲುವನ್ನು ಘೋಷಿಸಿದರು.
ನೂತನ ಉಪಾಧ್ಯಕ್ಷ ಸುರೇಶ್ ಮಾತನಾಡಿ, ರೈತರ ಹಿತ ಕಾಯುವುದಲ್ಲದೆ, ಶಾಸಕರ ಸಹಕಾರ ಪಡೆದು ರೈತರಿಗೆ ಮತ್ತಷ್ಟು ಸಾಲ ಕೊಡಿಸುವಲ್ಲಿ ಹಾಗೂ ಸೊಸೈಟಿಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಸುರೇಶ್ ಅವರನ್ನು ಸೊಸೈಟಿ ಅಧ್ಯಕ್ಷ ಡಿ.ಕೆ.ಲತಾ ಸುರೇಶ್, ನಿರ್ದೇಶಕರಾದ ನಂಜುಂಡಸ್ವಾಮಿ, ಮಂಜಪ್ಪ, ಡಿ.ಕೆ.ರಂಗಸ್ವಾಮಿ, ಜಿ.ಕೆ.ಮಧು, ಗೋವಿಂದಯ್ಯ, ಬೋರೇಗೌಡ, ಕಾವೇರಮ್ಮ, ಸುನಂದಮ್ಮ ಹಾಗೂ ರಾಕೇಶ್ ಅಭಿನಂದಿಸಿದರು.
ಸೊಸೈಟಿಯ ಮೇಲ್ವಿಚಾರಕ ಅಭಿಲಾಷ್, ಸಿಇಒ ರಮೇಶ್ ಉಪಸ್ಥಿತರಿದ್ದರು.