ಪಿಎಚ್‌ಸಿಗಳಲ್ಲೂ 24x7 ಸೇವೆ

21manju41-Web
ಬೆಳಗಾವಿ ನಗರದ ಬಿಮ್ಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಉದ್ಘಾಟಿಸಿದರು. ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಡಿಸಿ ಎಂ.ಜಿ. ಹಿರೇಮಠ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಇದ್ದರು.
Published on

ಪಿಎಚ್‌ಸಿಗಳಲ್ಲೂ, 24x7, ಸೇವೆ, ಸಚಿವ, ಸುಧಾಕರ, ಮಾಹಿತಿ, ಸರ್ಕಾರಿ, ಆಸ್ಪತ್ರೆಗಳಲ್ಲಿ, ಎಲ್ಲ, ಪರೀಕ್ಷೆಗಳೂ, ಉಚಿತ, ಆ್ಯಂಬುಲೆನ್ಸ್, ಸೇವೆ, ಬಲವರ್ಧನೆಗೆ, ತೀರ್ಮಾನ, ಬೆಳಗಾವಿ, PHCs, 24x7, Service, Minister, Reformer, Information, Government, Hospitals, All, Exam, Free, Ambulance, Service, Strengthening, Conclusion, Belagavi

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 2,350ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24x7 ಕಾರ್ಯ ನಿರ್ವಹಿಸುವಂತೆ ಪರಿವರ್ತಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ತಿಳಿಸಿದರು.

ನಗರದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆವರಣದಲ್ಲಿ ವಿವಿಧ ವೈದ್ಯಕೀಯ ವಿಭಾಗಗಳ ಕಟ್ಟಡಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದ ದಿನಗಳಲ್ಲಿ ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಸೇವೆ ಉನ್ನತೀಕರಣಗೊಳಿಸಬೇಕಾಗಿದೆ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಚೀಟಿ ರಹಿತ ವ್ಯವಸ್ಥೆ: 2021ರ ಜನವರಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ ಸೇರಿದಂತೆ ಎಲ್ಲ ಮಾದರಿಯ ಪರೀಕ್ಷೆಗಳನ್ನು ಸಂಪೂರ್ಣ ಉಚಿತ ಸೇವೆಯಾಗಿ ನೀಡಲು ನಿರ್ಧರಿಸಲಾಗಿದೆ. ಚೀಟಿರಹಿತ ವ್ಯವಸ್ಥೆ ಜಾರಿಗೆ ತರಲು ಎಲ್ಲ ಸೌಲಭ್ಯಗಳನ್ನೂ ಈಗಾಗಲೇ ಒದಗಿಸಲಾಗಿದೆ. ಯಾವುದೇ ಔಷಧದ ಅಗತ್ಯವಿದ್ದರೂ ಸರ್ಕಾರ ಪೂರೈಸುತ್ತಿದೆ. ಜನಸಂಖ್ಯೆ ಅಧರಿಸಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು. ಆ್ಯಂಬುಲೆನ್ಸ್ ಸೇವೆ ಬಲವರ್ಧನೆಗೆ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಲಾಖೆ ವಿಲೀನ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಬೇರೆ ಬೇರೆಯಾಗಿ ನಿರ್ವಹಣೆ ಮಾಡುವುದು ಕಷ್ಟ ಎನ್ನುವುದು ಕೋವಿಡ್-19 ಸಂದರ್ಭದಲ್ಲಿ ಮನದಟ್ಟಾಗಿದೆ. ಹೀಗಾಗಿ ಎರಡೂ ಇಲಾಖೆಗಳನ್ನು ಒಂದೇ ಮಾಡುವ ಚಿಂತನೆ ಸರ್ಕಾರದ ಮುಂದಿದೆ. ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರ ಶೀಘ್ರದಲ್ಲಿಯೇ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

ಹೊಣೆ ನಿಭಾಯಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ನೋಡಿದರೆ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದಲ್ಲಿ ಸಂಖ್ಯೆ ಕಡಿಮೆ ಇದೆ. ಈ ತಾರತಮ್ಯ ವ್ಯವಸ್ಥೆಯನ್ನೂ ಆದಷ್ಟು ಬೇಗ ಬದಲಾಯಿಸುತ್ತೇವೆ. ಉತ್ತರ ಕರ್ನಾಟಕದಲ್ಲೂ ನಿಯಮಾನಸಾರ ಹೊಸ ಆರೋಗ್ಯ ಕೇಂದ್ರ ಆರಂಭಿಸಲಾಗುವುದು. ವಾರದಲ್ಲಿ ಎರಡು ದಿನ ಆರೋಗ್ಯಾಧಿಕಾರಿಗಳು ಪ್ರವಾಸ ಮಾಡಬೇಕು. ಗ್ರಾಮೀಣ ಜನರ ಆರೋಗ್ಯ ಸಮಸ್ಯೆ ಗುರುತಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಆರೋಗ್ಯ ಸೇವೆಗಳ ಹೊಣೆಗಾರಿಕೆ ಜವಾಬ್ದಾರಿಯನ್ನು ಆರೋಗ್ಯ ಇಲಾಖೆ ಮುಖ್ಯಸ್ಥರಿಗೆ ನೀಡಲಾಗುತ್ತಿದೆ ಎಂದರು.ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಡಿಸಿ ಡಾ.ಎಂ.ಜಿ.ಹಿರೇಮಠ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಆಫ್ರೀನ್ ಬಾನು ಬಳ್ಳಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ.ಮುನ್ಯಾಳ ಇತರರು ಇದ್ದರು.

ಬಿಮ್ಸ್‌ನಿಂದ ಅತ್ಯುತ್ತಮ ಸೇವೆ

ಕೋವಿಡ್-19 ಸಂದರ್ಭದಲ್ಲಿ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿನ ವೇಗ ಮತ್ತು ಪ್ರಮಾಣ ಹೆಚ್ಚಿದ್ದರೂ ಪರಿಣಾಮಕಾರಿಯಾಗಿ ನಿಭಾಯಿಸುವುದರಲ್ಲಿ ಜಿಲ್ಲಾಡಳಿತ ಮಾದರಿ ಕೆಲಸ ಮಾಡಿದೆ. ಅಲ್ಲದೆ, ಶೇ. 90ರಷ್ಟು ಸೋಂಕಿತರು ಗುಣಮುಖರಾಗುತ್ತಿರುವುದು ಇನ್ನೂ ಉತ್ತಮ ಬೆಳವಣಿಗೆ. ಕಳೆದ 15 ದಿನಗಳಿಂದ ಸೋಂಕಿತರ ಸಾವಿನ ಪ್ರಮಾಣ ಶೇ.0.8ರಷ್ಟಿರುವುದು ನಿಜಕ್ಕೂ ಶ್ಲಾಘನೀಯ. ಖಾಸಗಿ ಸಂಸ್ಥೆಯೊಂದು ಅತ್ಯುತ್ತಮ ಸೇವೆ ನೀಡುತ್ತಿರುವ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಬೆಳಗಾವಿಯ ಬಿಮ್ಸ್ ಸ್ಥಾನ ಪಡೆದುಕೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ತಿಳಿಸಿದರು.

ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಭರವಸೆ

ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಇಲ್ಲದಿರುವುದರಿಂದ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕು. 500 ಹಾಸಿಗೆಯ ನೂತನ ಆಸ್ಪತ್ತೆಯ ನಿರ್ಮಾಣದ ಅಗತ್ಯವಿದ್ದು, ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಆಸ್ಪತ್ರೆ ನಿರ್ಮಿಸಬೇಕು ಎಂದು ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಶೀಘ್ರ ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಡಾ. ಸುಧಾಕರ ಭರವಸೆ ನೀಡಿದರು.

ವೈದ್ಯರ ನಿರ್ಲಕ್ಷ್ಯಕ್ಕೆ ಸಚಿವರ ಆಕ್ರೋಶ

ನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಎಂಬುದಿಲ್ಲ. ಅಲ್ಲದೆ, ಕುಡಿಯುವ ನೀರು ಹಾಗೂ ವಿದ್ಯುತ್ ಸೇರಿದಂತೆ ಯಾವುದೇ ಸೌಲಭ್ಯವೂ ಇಲ್ಲ ಎಂದು ರೋಗಿಗಳು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರಿಗೆ ದೂರು ನೀಡಿದರು. ಇದರಿಂದ ಆಕ್ರೋಶಿತರಾದ ಸಚಿವರು, ‘ಸರಿಯಾಗಿ ಕೆಲಸ ಮಾಡಲು ಆಗದಿದ್ದರೆ ದನ ಕಾಯಲು ಹೋಗಿ. ಆಸ್ಪತ್ರೆ ನಿರ್ವಹಣೆಗೆ 36 ಲಕ್ಷ ರೂ. ನೀಡುತ್ತಿದ್ದೇವೆ. ಇದರಲ್ಲಿ ಸರ್ಕಾರದ್ದೇನು ತಪ್ಪಿದೆ? ನೀವೇಕೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು
ಬಿಮ್ಸ್ ನಿರ್ದೇಶಕ ಹಾಗೂ ವೈದ್ಯಕೀಯ ಅಧೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಸಮಸ್ಯೆಗಳ ಕುರಿತು ಮತ್ತೆ ದೂರು ಬಂದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net