ಪಿಎಂ ಸ್ವನಿಧಿ ಬಳಕೆಯಲ್ಲಿ ಸಾಧನೆ

20
Published on

ಮೈಸೂರು: ಪಿಎಂ ಸ್ವನಿಧಿ ಬಳಕೆಯಲ್ಲಿ ಮೈಸೂರಿಗೆ 2ನೇ ಸ್ಥಾನ ದೊರೆತಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.

ಪಾಲಿಕೆಯಿಂದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಡೇ-ನಲ್ಮ್ ಹಾಗೂ ಪಿಎಂ ಸ್ವ-ನಿಧಿ ಯೋಜನೆಯ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರದ ರಸ್ತೆ ಬದಿ ವ್ಯಾಪಾರಿಗಳು ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಈ ಯೋಜನೆ ಸಹಕಾರಿಯಾಗಿದೆ. ಬಡವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಪಿಎಂ ಸ್ವನಿಧಿ ಯೋಜನೆ ಜಾರಿಗೆ ತಂದರು. ಇದರಿಂದ ದೇಶದಲ್ಲಿ 13.50 ಕೋಟಿ ಜನರು ಬಡತನ ರೇಖೆಗಿಂತ ಹೊರಗೆ ಬಂದಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯ ಸಿಗುತ್ತಿರಲಿಲ್ಲ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕಾರ್ಯಕ್ರಮದೊಂದಿಗೆ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವಂತೆ ಗುರಿಯನ್ನು ನೀಡಿದೆ. ಇದರಿಂದ ವಿವಿಧ ಬ್ಯಾಂಕ್‌ಗಳು ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ಉತ್ಸುಕವಾಗಿವೆ. ಇಂತಹ ಬದಲಾವಣೆಯನ್ನು ಇದೀಗ ಕಾಣಬಹುದಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಯುವಕರು, ಬೀದಿಬದಿ ವ್ಯಾಪಾರಿಗಳು, ಮಹಿಳೆಯರು ಸೇರಿದಂತೆ ಅಸಂಘಟಿತರ ಏಳಿಗೆಗೆ ಪ್ರಧಾನಿ ಮೋದಿ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಸೈನ್ಯದಿಂದ ವಾಪಸಾದ ನನಗೆ ಹಸು ಸಾಕಣೆ ಮಾಡಲು 10 ಸಾವಿರ ರೂ. ಸಾಲ ಸಿಕ್ಕಿರಲಿಲ್ಲ. ಒಂದು ವೇಳೆ ದೊರೆತಿದ್ದರೆ ನಾನು ವಿಧಾನ ಪರಿಷತ್ ಸದಸ್ಯನಾಗುತ್ತಿರಲಿಲ್ಲ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಪ್ರಸ್ತುತ ನೀಡುತ್ತಿರುವ 40 ಸಾವಿರ ರೂ. ಸಾಲ ವ್ಯಾಪಾರಕ್ಕೆ ಸಾಲುತ್ತಿಲ್ಲ. ಇದರಿಂದ ಸಾಲದ ಮೊತ್ತವನ್ನು ಒಂದು ಲಕ್ಷ ರೂ.ಗೆ ಏರಿಸಬೇಕು. ಪಾಲಿಕೆಯ ಆದಾಯ ಹಾಗೂ ಸಿಎಸ್‌ಆರ್ ನಿಧಿಯಲ್ಲಿ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.

ಉಪ ಮೇಯರ್ ಡಾ.ಎಂ.ಜಿ.ರೂಪಾ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎಂ.ಶಾಂತಕುಮಾರಿ, ಸವಿತಾ ರಮೇಶ್, ಆಡಳಿತ ಪಕ್ಷದ ನಾಯಕ ಮಾ.ವಿ.ರಾಮಪ್ರಸಾದ್, ಹೆಚ್ಚುವರಿ ಆಯುಕ್ತೆ ಎ.ಜೆ.ರೂಪಾ ಇನ್ನಿತರರು ಉಪಸ್ಥಿತರಿದ್ದರು.

ಆರ್ಥಿಕ ನೆರವು ವಿತರಣೆ
ಬಡ ಕುಟುಂಬದ ಮಹಿಳೆಯರ ಸಬಲೀಕರಣಕ್ಕಾಗಿ ಡೇ-ನಲ್ಮ್ ಹಾಗೂ ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳಿಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆರ್ಥಿಕ ನೆರವು ವಿತರಿಸಲಾಯಿತು.

ಕೇಂದ್ರ ಪುರಸ್ಕೃತ ಯೋಜನೆಗಳಾದ ದೀನ ದಯಾಳ್ ಅಂತ್ಯೋದಯ - ರಾಷ್ಟ್ರೀಯ ನಗರ ಜೀವನೋಪಾಯ(ಡೇ-ನಲ್ಮ್), ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವನಿಧಿ) ಹಾಗೂ ಪ್ರಧಾನ ಮಂತ್ರಿ ಕಿರು ಆಹಾರ ಉದ್ದಿಮೆ ಯೋಜನೆಗಳ ಫಲಾನುಭವಿಗಳಿಗೆ ಸಾಲ ಸೌಲಭ್ಯ ವಿತರಣೆ, ಪ್ರಮಾಣ ಪತ್ರ, ಉತ್ತಮ ಸಂಘಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ‘ನನ್ನ ಮಣ್ಣು ನನ್ನ ದೇಶ’ ಶೀರ್ಷಿಕೆಯಡಿ ‘ಜೀವನೋಪಾಯ ವರ್ಷ-2023’ ಎಂದು ಆಚರಿಸಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಬಡ ಕುಟುಂಬದ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ನಿಟ್ಟಿನಲ್ಲಿ ಉಭಯ ಯೋಜನೆಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net