

ಚಿತ್ರದುರ್ಗ: ರಾಜ್ಯ ನದಾಫ್-ಪಿಂಜಾರ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಿದ್ದು, ಅಧ್ಯಕ್ಷರನ್ನು ನೇಮಿಸುವುದರ ಜತೆಗೆ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ಸಮುದಾಯದವರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು. ಮೂಲತಃ ಅಲೆಮಾರಿ ಸಮುದಾಯವಾಗಿದ್ದು, ಸರ್ಕಾರ ಸ್ಪಂದಿಸದಿದ್ದಲ್ಲಿ ಶಕ್ತಿ ಪ್ರದರ್ಶಿಸಲು ಸಿದ್ಧ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಸಮುದಾಯ ಹೊಂದಿದೆ. ಆದರೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ಹಾಸಿಗೆ ಹೊಲಿಯುವ, ಹಗ್ಗ ಪುಟ್ಟಿ ನೇಯ್ದು ಜೀವನ ಸಾಗಿಸುತ್ತಿದ್ದಾರೆ. ಈವರೆಗೂ ಆಳಿದ ಎಲ್ಲ ಪಕ್ಷಗಳು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದ್ದು, ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಎಸ್.ರಶೀದ್ ಮಾತನಾಡಿ, ಬಜೆಟ್ನಲ್ಲಿ ಸಮುದಾಯಕ್ಕೆ ವಿಶೇಷ ಅನುದಾನ ಮೀಸಲಿಡುವಂತೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಆರ್ಥಿಕವಾಗಿ ಹಿಂದುಳಿದಿದ್ದೇವೆ ಎನ್ನುವ ಕಾರಣಕ್ಕೆ ನಿರ್ಲಕ್ಷಿಸುತ್ತ ಬರುತ್ತಿರುವುದು ನೋವಿನ ಸಂಗತಿ. ಪ್ರವರ್ಗ-1ಕ್ಕೆ ಸೇರಿದ್ದರೂ ತಹಸೀಲ್ದಾರ್ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಹಿಂದಿನ ಸರ್ಕಾರ ಸಮುದಾಯ ನೇರ ಸೌಲಭ್ಯ ಪಡೆಯಲೆಂದು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿತು. ಆದರೆ, ಈವರೆಗೂ ಅಧ್ಯಕ್ಷರನ್ನು ನೇಮಿಸಿ ಅನುದಾನ ನೀಡಿಲ್ಲ. ಈಗಲಾದರೂ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಎಂದು ಸರ್ಕಾರಕ್ಕೆ ಕೋರಿದರು.
ರಾಜ್ಯ ಪಿಂಜಾರ-ನದಾಫ್ ಸಂಘದ ರಾಜ್ಯಾಧ್ಯಕ್ಷ ಎಚ್.ಜಲೀಲ್ಸಾಬ್, ಸಮಿತಿ ಸದಸ್ಯ ಬಿ.ಗರೀಬ್ಆಲಿ ಮುನ್ನ, ಕಾರ್ಯದರ್ಶಿ ಅಲ್ಲಿಪೀರ್, ಉಪಾಧ್ಯಕ್ಷರಾದ ಟಿ.ಶಫಿವುಲ್ಲಾ, ಎಂ.ಮಹಮದ್ ಇಮಾಂ, ಪದಾಧಿಕಾರಿಗಳಾದ ಜೆ.ಕೆ.ಅಕ್ಬರ್ಭಾಷಾ, ಎಚ್.ದಾದಾಪೀರ್, ಬುಡೇನ್ಸಾಬ್, ಮಹಮದ್ ಆಲಿ, ವೈ.ಎಚ್.ಹುಸೇನ್ಪೀರ್, ಅಸ್ಮತ್ ಉನ್ನಿಸಾ, ಅಬ್ದುಲ್ ಕಲಾಂ, ಮಹಮದ್ ಆಲಿ, ರುಖಯ್ಯಬಿ, ಎಚ್.ಅಬ್ದುಲ್ ಲತೀಫ್ ಇತರರಿದ್ದರು.