ಮೈಸೂರು: ಹಿಂದಿನ ವ್ಯವಸ್ಥೆಯಂತೆ ಪಿಂಚಣಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಅ.26ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಸರ್ಕಾರಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ನೀಡುತ್ತಿರುವ ಪಿಂಚಣಿ ವ್ಯವಸ್ಥೆಯನ್ನು ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರವಾಗಿ ಧರಣಿ ನಡೆಯಲಿದೆ. ಧರಣಿಗೆ ಬೆಂಬಲ ವ್ಯಕ್ತಪಡಿಸಿ ಅಂದು ಜಿಲ್ಲೆಯಿಂದಲೂ ನೂರಾರು ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಶಿಂಡೇನಹಳ್ಳಿ ಡಿ.ಶರತ್‌ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2004ರ ಜನವರಿ ಒಂದರ ಬಳಿಕ ನಿವೃತ್ತರಾದವರಿಗೆ ಸರ್ಕಾರ ಯಾವುದೇ ಪಿಂಚಣಿ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ಕುಟುಂಬ, ನಿವೃತ್ತರ ಜೀವನ ನಿರ್ವಹಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರಿ ಶಾಲಾ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೀಡುತ್ತಿರುವ ಪಿಂಚಣಿ ಸೌಲಭ್ಯದಂತೆ ಅನುದಾನಿತ ಬೋಧಕ, ಬೋಧಕೇತರಿಗೂ ನೀಡಬೇಕು. ಈ ನಿಟ್ಟಿನಲ್ಲಿ ನಡೆದಿರುವ ಹೋರಾಟ ಬೇಡಿಕೆ ಈಡೇರುವವರೆಗೂ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ತುಮಕೂರಿನ ಸಿದ್ಧಗಂಗಾಶ್ರೀಗಳು ಈಗಾಗಲೇ ನಮ್ಮ ಹೋರಾಟಕ್ಕೆ ಚಾಲನೆ ನೀಡಿದ್ದು, ಹೋರಾಟ ನಿರಂತರವಾಗಿ ನಡೆಯುತ್ತಿದೆ. ಒಂದೊಂದು ದಿನ ಒಂದೊಂದು ಜಿಲ್ಲೆಯ ನೌಕರರು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಪದಾಧಿಕಾರಿಗಳಾದ ಬಿ.ಆರ್.ಶಿವಕುಮಾರ್, ಎಂ.ಎಂ.ದಿನೇಶ್, ಮಹೇಶ್, ಬಿ. ಸಿದ್ದರಾಜು, ಚಂದ್ರಶೇಖರ್, ಸಿದ್ದೇಗೌಡ ಇದ್ದರು.