ಪಿಂಚಣಿ ಯೋಜನೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

mysore
Published on

ಮೈಸೂರು: ಕೇಂದ್ರ ನೌಕರರ ಪಿಂಚಣಿ ಯೋಜನೆಗೆ ತಿದ್ದುಪಡಿ ಮಾಡಿರುವ ಕ್ರಮವನ್ನು ವಿರೋಧಿಸಿ ಪಿಂಚಣಿದಾರರ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರು

ನಗರದಲ್ಲಿ ಪ್ರತಿಭಟನೆ ನಡೆಸಿದರು

ನಗರದ ಜಯಲಕ್ಷ್ಮೀಪುರಂನ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಯೋಜನೆಗೆ ತಿದ್ದುಪಡಿ ಮಸೂದೆ ಮಂಡಿಸಿ ಅಂಗೀಕರಿಸಿದೆ.

ಇದು ಲಕ್ಷಾಂತರ ಪಿಂಚಣಿದಾರರ ಹಿತಾಸಕ್ತಿಗೆ ಮಾರಕವಾಗಲಿದೆ. ಪಿಂಚಣಿದಾರರ ನಡುವೆ ತಾರತಮ್ಯ ನಿರ್ಮಿಸಲಿದೆ. ಈಗಾಗಲೇ ಪಿಂಚಣಿ ಪಡೆಯಲು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಂದೆ ತುತ್ತು ಅನ್ನಕ್ಕೂ ಸರ್ಕಾರ ಕಲ್ಲು ಹಾಕಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ಮಾಡುವ ಕಾರ್ಮಿಕ ಮುಖಂಡರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ದಸ್ತಗಿರಿ ಮಾಡಲು ಸರ್ಕಾರ ಹೊರಟಿದೆ. ನಮ್ಮನ್ನು ವಿಚಾರಣೆ ಇಲ್ಲದೆ ಬಂಧಿಸುವ ಕಾನೂನು ತರಲಾಗುತ್ತಿದೆ. ಈ ಮೂಲಕ ಕಾರ್ಪೋರೇಟ್ ಕಂಪೆನಿಗಳ ಆಶಯವನ್ನು ಸರ್ಕಾರ ಈಡೇರಿಸುತ್ತಿದೆ ಎಂದು ದೂರಿದರು.

ಮಸೂದೆಯು 2026ರ ನಂತರ ನಿವೃತ್ತಿಯಾಗುವವರಿಗೆ ಪೂರಕವಾಗಿದೆ. ಅದಕ್ಕಿಂತ ಹಿಂದೆ ನಿವೃತ್ತಿಯಾದವರು ಏನು ತಪ್ಪು ಮಾಡಿದ್ದಾರೆ? ತಕ್ಷಣವೇ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆದು, ಎಲ್ಲರಿಗೂ ಸಹಕಾರಿಯಾಗುವಂತೆ ರೂಪಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪರಮೇಶ್ವರಯ್ಯ, ಚಂದ್ರಶೇಖರ, ಉಮಾಪತಿ, ಶ್ರೀಧರ್, ಸುಬ್ರಹ್ಮಣ್ಯ, ರಾಜಶೇಖರ್, ಜಯರಾಮ್, ಎಸ್.ವಿಷಕಂಠ ಮೂರ್ತಿ, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net