

ಚಿಕ್ಕಮಗಳೂರು: ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಭಾರತೀಯ ಉಡುಗೆ ತೊಡುಗೆಗಳನ್ನು ತೊಟ್ಟು ನಮ್ಮ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಶ್ರೀ ವರಮಹಾಲಕ್ಷ್ಮೀ ಪೂಜೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶಿ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಬೆಳೆಸುತ್ತಿರುವುದರಿಂದಲೇ ಬಿಜೆಪಿಯನ್ನು ಜನ ಸಾಮಾನ್ಯರು ಒಪ್ಪುತ್ತಿದ್ದಾರೆ ಎಂದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಭಾರತೀಯ ಸಂಸ್ಕೃತಿ ದಮನ ಮಾಡಲು ಹೊರಟಿದ್ದಾರೆ. ಅಂಥವರನ್ನು ಮಟ್ಟ ಹಾಕಬೇಕು. ಭಾರತ ಒಳ್ಳೆ ಸಂಸ್ಕೃತಿ ಮತ್ತು ಸಂಗತಿಗಳನ್ನು ಪ್ರಪಂಚದ ಮುಂದೆ ಇಡುತ್ತಿರುವುದರಿಂದ ದೇಶದ ಬಗ್ಗೆ ಹೆಚ್ಚು ಗೌರವವಿದೆ ಎಂದರು. ಮನೆಗಳಲ್ಲಿ ಅಷ್ಟ ಲಕ್ಷ್ಮೀಯನ್ನು ಕೂರಿಸಿ ಪೂಜಿಸುತ್ತೇವೆ. ಆದರೆ ಪಕ್ಷದ ಕಚೇರಿಯಲ್ಲಿ ಮಹಿಳೆಯರು ವರಮಹಾಲಕ್ಷ್ಮೀ ಪೂಜೆ ಮಾಡುವ ಮೂಲಕ ಜನರ ಒಳಿತು ಬಯಸಿ ಸಾಮೂಹಿಕವಾಗಿ ಪ್ರಾರ್ಥಿಸುತ್ತಿರುವುದು ಸುಸಂಸ್ಕೃತ ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ರತ್ನಾಕರ್ ಶೆಟ್ಟಿ ಮಾತನಾಡಿ, ಯಾವುದೇ ರಾಜಕೀಯ ಪಕ್ಷದ ಕಚೇರಿಗಳಲ್ಲಿ ಧಾರ್ವಿುಕ ಕಾರ್ಯಗಳನ್ನು ನಡೆಸುವುದು, ಹಬ್ಬ ಹರಿದಿನಗಳನ್ನು ಆಚರಿಸುವುದಿಲ್ಲ. ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಜನರ ಒಳಿತಿಗಾಗಿ ಮಹಿಳಾ ಮೋರ್ಚಾ ಕಾರ್ಯಕರ್ತರು ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಬೆಳೆಸಿ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.