

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸುವ 9 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಹನೂರು ಶಾಸಕ ಆರ್. ನರೇಂದ್ರ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಆರ್.ನರೇಂದ್ರ ಮಾತನಾಡಿ, ಪಾಳ್ಯ ಹೋಬಳಿ ವ್ಯಾಪ್ತಿಯ ಜನರ ಆರೋಗ್ಯ ದೃಷ್ಟಿಯಿಂದ 30 ಹಾಸಿಗೆ ಸಾಮಥ್ಯವುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಪಾಳ್ಯ ಗ್ರಾಮದಲ್ಲಿ ಚಾಲನೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸಾ ಕೊಠಡಿ, ರೋಗಿಗಳ ವಾರ್ಡ್‌ಗಳು, ದಾದಿಯರ ಕೊಠಡಿ ಸೇರಿದಂತೆ ಗುಣಮಟ್ಟ ಕಟ್ಟಡ ನಿರ್ಮಾಣವಾಗಲಿದೆ. ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡ ಬಳಿಕ ನಿತ್ಯವೂ 3ರಿಂದ 4 ವೈದ್ಯರು ಸೇವೆ ಸಲ್ಲಿಸಲಿದ್ದಾರೆ. ಇದ್ದರಿಂದ ಬೆಳಗ್ಗೆ ಹಾಗೂ ರಾತ್ರಿ ತಪಾಸಣೆಗೆ ಬರುವ ಜನರಿಗೆ ಅನುಕೂಲವಾಗಲಿದೆ. 11 ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯಗೊಳಿಸಲು ನಿಬಂಧನೆ ಇದ್ದು ಅದರಂತೆ ಕೆಲಸವಾಗಬೇಕು ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು.
ಸತ್ತೇಗಾಲ, ತೆಳ್ಳನೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಗ್ರಾಮಗಳಿಗೂ ಪಾಳ್ಯ ಗ್ರಾಮ ಹತ್ತಿರವಿದ್ದು, ಈ ಭಾಗದಲ್ಲಿ ಬರುವ ಹತ್ತಾರು ಹಳ್ಳಿಗಳ ಜನರಿಗೆ ಮುಂದಿನ ದಿನಗಳಲ್ಲಿ 30 ಹಾಸಿಗೆ ಸಾಮಾರ್ಥ್ಯವುಳ್ಳ ಆಸ್ಪತ್ರೆಯು ಸಹಕಾರಿಯಾಗಲಿದೆ. ಇದರಂತೆ ನಾಲ್ಕೈದು ದಿನದಲ್ಲಿ ದೊಡ್ಡಿಂದುವಾಡಿ ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಸದಸ್ಯರಾದ ಜಗದೀಶ್ ನಾಯಕ, ಗೌರೀಶ್, ರಾಜು, ಸೀಗಣ್ಣ, ಲಕ್ಷ್ಮಮ್ಮ, ಮಹದೇವಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ಗೊಪಾಲ್, ಪಾಳ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅಭಿಷೇಕ, ಎಇಇ ದೊರೆಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜನೇದ್ ಅಹಮದ್, ಮುಖಂಡರಾದ ಸೀಗನಾಯಕ, ಬಸವನಾಯಕ, ರೇಚ, ಸಿದ್ದರಾಜು, ಸುನೀಲ್, ಸಿದ್ದರಾಜು ನಾಯಕ, ಪಾಳ್ಯ ಕೃಷ್ಣ ಇದ್ದರು.
ಕೊಟ್ಟ ಮಾತನ್ನು ತಪ್ಪಿದ ಸಿಎಂ: ಹನೂರು ಪಟ್ಟಣಕ್ಕೆ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುವುದು ನನ್ನ ಬಹಳ ವರ್ಷಗಳ ಆಸೆಯಾಗಿದೆ. ಇದಕ್ಕೆ 3 ವರ್ಷದಿಂದಲೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರನ್ನು ಕೇಳಿಕೊಂಡಿದ್ದೆ. ಮನವಿಯಂತೆ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಕಳೆದ ಡಿಸೆಂಬರ್ ತಿಂಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದಾಗಲೂ ಸಿಎಂ ಬಳಿ ಮತ್ತೆ ಮನವಿ ಮಾಡಿದ್ದೆ. ಖಂಡಿತವಾಗಿಯೂ ಆಸ್ಪತ್ರೆಗೆ ಕ್ರಮ ಕೈಗೊಳ್ಳುವುದಾಗಿ ಸಾವಿರಾರು ಜನರ ಸಮ್ಮುಖದಲ್ಲಿ ಭರವಸೆ ನೀಡಿದ್ದರು. ಆದರೆ, ಆ ಮಾತನ್ನು ಅವರು ಉಳಿಸಿಕೊಳ್ಳಲಿಲ್ಲ. ಬಜೆಟ್‌ನಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ನಂತರ ಫೆಬ್ರವರಿ ತಿಂಗಳಲೂ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರೂ ಆಗಲೂ ಆಸ್ಪತ್ರೆ ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದರು. ಇತ್ತೀಚೆಗೆ ಮಲೆ ಮಹದೇಶ್ವರ ಮೂರ್ತಿ ಲೋಕಾರ್ಪಣೆೆಗೆ ಮತ್ತೆ ಬೆಟ್ಟಕ್ಕೆ ಬಂದಿದ್ದಾಗಲೂ ಈ ಬಗ್ಗೆ ಘೋಷಣೆ ಮಾಡದಿರುವುದು ಬೇಸರ ತಂದಿದೆ. ಜನರ ಆರೋಗ್ಯ ದೃಷ್ಟಿಯಿಂದ ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಸಿಎಂ ಬೊಮ್ಮಾಯಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಮುಂದೆ ಜನರ ಆಶೀರ್ವಾದದಿಂದ ನಮ್ಮ ಸರ್ಕಾರವೇ ಬರಲಿದೆ. ಆಗ ನಾನೇ ಈ ಕೆಲಸ ಮಾಡೇ ಮಾಡುತ್ತೇನೆ ಎಂದು ತಿಳಿಸಿದರು.