

ಮಂಜುನಾಥ ಟಿ.ಭೋವಿ ಮೈಸೂರು
ಪ್ರವಾಸಿಗರನ್ನು ಆಕರ್ಷಿಸಬೇಕಿದ್ದ ಬೃಹತ್ ಮತ್ಸಾೃಗಾರ(ಅಕ್ವೇರಿಯಂ) ಇದೀಗ ಪಾಳುಬಿದ್ದ ಕಟ್ಟಡ…!
ನಗರದ ಪ್ರಮುಖ ಪ್ರವಾಸಿ ತಾಣವಾದ ಶ್ರೀ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿರುವ ಈ ಮತ್ಸಾೃಗಾರ 10 ವರ್ಷವಾದರೂ ಇನ್ನೂ ಕಣ್ತೆರೆದಿಲ್ಲ. ಇದರ ಫಲವಾಗಿ ಹಾಳುಕೊಂಪೆಯಾಗಿರುವ ಈ ಕಟ್ಟಡ ಈಗ ನಿರುಪಯುಕ್ತವಾಗಿದೆ.
ವರ್ಣರಂಜಿತ ಮೀನುಗಳ ಆಶ್ರಯ ತಾಣವಾಗಬೇಕಿದ್ದ ಈ ಜಾಗದಲ್ಲೀಗ ಹಾವು-ಚೇಳು, ಇಲಿ-ಹೆಗ್ಗಣಗಳ ಕಾರುಬಾರು ನಡೆಯುತ್ತಿದೆ. ಯೋಜನಾಬದ್ಧತೆ ಮತ್ತು ದೂರದೃಷ್ಟಿ ಕೊರತೆಯಿಂದ ಕಾಮಗಾರಿಗಳು ಹೇಗೆ ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದುವೇ ಜ್ವಲಂತ ನಿದರ್ಶನ.
4.26 ಕೋಟಿ ರೂ. ವ್ಯರ್ಥ:
ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಮತ್ಸ್ಯಾಗಾರ ನಿರ್ಮಾಣ ಕಾಮಗಾರಿಯನ್ನು 2010-11ನೇ ಸಾಲಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿತ್ತು. 4.26 ಕೋಟಿ ರೂ. ವೆಚ್ಚದಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಅಕ್ವೇರಿಯಂ ಕಟ್ಟಡದ ಕೆಲಸವೇನೋ ಎರಡು ವರ್ಷದಲ್ಲೇ ಪೂರ್ಣಗೊಂಡಿತು. ಬಳಿಕ ಅನುದಾನದ ಕೊರತೆ ನೆಪದಲ್ಲಿ ಕೆಲಸ ಸ್ಥಗಿತಗೊಂಡಿತು. ಇದರಿಂದ ಕಟ್ಟಡ ಹೊರತುಪಡಿಸಿ ಬೇರೇನೂ ಕೆಲಸ ಆಗಿಲ್ಲ.
ಅನೈತಿಕ ತಾಣವಾಗಿ ರೂಪಾಂತರ:
ಅಕ್ವೇರಿಯಂ ರೂಪಿಸಲು ಇನ್ನೂ ಕೋಟಿ ಕೋಟಿ ರೂಪಾಯಿ ಸುರಿಯಬೇಕಿತ್ತು. ಇದನ್ನು ಅರಿತು ಪಾಲಿಕೆ ಹಿಂದೆ ಸರಿಯಿತು. ಆಗ ಮೃಗಾಲಯ ಮತ್ತು ಪಾಲಿಕೆ ನಡುವೆ ತಿಕ್ಕಾಟ ಶುರುವಾಯಿತು. ಅಲ್ಲಿಂದ ಈ ಕಟ್ಟಡಕ್ಕೆ ಗ್ರಹಣ ಹಿಡಿಯಿತು. ಇದರಿಂದಾಗಿ ಇತ್ತ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ, ಅತ್ತ ಬಳಕೆಯೂ ಆಗುತ್ತಿಲ್ಲ. ಬದಲಿಗೆ ನಿಸ್ತೇಜವಾಗಿ ನಿಂತಿದೆ. ದೇಶದ ಅತಿ ದೊಡ್ಡ ಅಕ್ವೇರಿಯಂ ಆಗಬೇಕಿದ್ದ ಕಟ್ಟಡ ಇದೀಗ ಅನೈತಿಕ ತಾಣವಾಗಿ ಪರಿವರ್ತನೆಯಾಗಿದೆ ಎಂಬುದೇ ವಿಪರ್ಯಾಸ.
ಯಾರಿಗೂ ಆಸಕ್ತಿ ಇಲ್ಲ
ಮತ್ಸಾೃಗಾರದ ಆದಾಯ ಹಂಚಿಕೆ ಕುರಿತು ಮೃಗಾಲಯ ಮತ್ತು ಪಾಲಿಕೆ ನಡುವೆ ಒಪ್ಪಂದವಾಗಲಿಲ್ಲ. ಇದುವೇ ಮುಂದೆ ಕಗ್ಗಂಟಾಯಿತು. ಈ ‘ನಿರುಪಯುಕ್ತ ಸುಂದರಿ’ ಇದೀಗ ಯಾರಿಗೂ ಬೇಡವಾಗಿದೆ. ಅತ್ತ ಪಾಲಿಕೆಗೆ ಅಕ್ವೇರಿಯಂ ಕುರಿತು ಯಾವುದೇ ಆಸಕ್ತಿ ಇಲ್ಲ. ಮೃಗಾಲಯಕ್ಕೂ ಇದು ಒಲ್ಲದ ಹೆಂಡತಿಯಂತಾಗಿದೆ.
ಕೈಚೆಲ್ಲಿದ ಮೃಗಾಲಯ:
ಮೃಗಾಲಯ ಮತ್ತು ಪಾಲಿಕೆಯ ಹಗ್ಗಜಗ್ಗಾಟದಿಂದ ನಲುಗಿದ ಅಕ್ವೇರಿಯಂ ಈವರೆಗೂ ಮೇಲೇಳಲಿಲ್ಲ. ಈ ನಡುವೆ, ಜನಪ್ರತಿನಿಧಿಗಳ ಮಧ್ಯಪ್ರವೇಶದಿಂದ 2018ರ ಜುಲೈ 14ರಂದು ಈ ಕಟ್ಟಡವನ್ನು ಮೃಗಾಲಯಕ್ಕೆ ಹಸ್ತಾಂತರ ಮಾಡಲಾಗಿದೆ. ಇದರೊಂದಿಗೆ ಕಟ್ಟಡ ನಿರ್ಮಿಸಿದ್ದ ಪಾಲಿಕೆ ಸಂಪೂರ್ಣವಾಗಿ ಕೈತೊಳೆದುಕೊಂಡಿದೆ. ಮತ್ಸಾೃಗಾರದ ಸಂಪೂರ್ಣ ಹೊಣೆ ಮೃಗಾಲಯಕ್ಕೆ ಹಸ್ತಾಂತರವಾಗಿದೆ. ಅದಾಗಿ 4 ವರ್ಷ ಗತಿಸಿದರೂ ಏನೂ ಬದಲಾವಣೆ ಆಗಿಲ್ಲ. ಒಂದೇ ಒಂದು ಸಣ್ಣ ಕೆಲಸವೂ ನಡೆದಿಲ್ಲ. ಈಗಿರುವ ಕಟ್ಟಡವನ್ನು ಮೃಗಾಲಯದ ಕೆಲಸ-ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲೂ ಆಗಿಲ್ಲ.
ಇದು ಮೃಗಾಲಯಕ್ಕೂ ಬೇಡವಾಗಿದೆ. ಹೀಗಾಗಿ, ಯಾವುದೇ ಪ್ರಯತ್ನ ಮಾಡದೆ ಕೈಕಟ್ಟಿ ಕುಳಿತುಕೊಂಡಿರುವುದರಿಂದ ಅಭಿವೃದ್ಧಿಯನ್ನೂ ಮಾಡುತ್ತಿಲ್ಲ. ಅಕ್ವೇರಿಯಂ ಆಗಿಯೂ ರೂಪುಗೊಳಿಸುತ್ತಿಲ್ಲ. ಒಟ್ಟಿನಲ್ಲಿ ಈ ಕುರಿತು ಮೃಗಾಲಯ ನಿರ್ಲಕ್ಷೃ ತೋರುತ್ತಿದೆ. ಸರ್ಕಾರದ ಕೋಟ್ಯಂತರ ರೂಪಾಯಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ವ್ಯರ್ಥವಾಗಿದೆ.
ಹಿಂದೆ ಸರಿದ ನ್ಯೂಜಿಲೆಂಡ್ ಮೂಲದ ಕಂಪನಿ:
ಅರೆಬರೆಯಾಗಿರುವ ಈ ಮತ್ಸಾೃಗಾರ ಕೆಲಸವನ್ನು ಪೂರ್ಣಗೊಳಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಕ ಹೊಸ ಸ್ಪರ್ಶ ನೀಡಲು ನ್ಯೂಜಿಲೆಂಡ್ ಮೂಲದ ಕಂಪನಿಯೊಂದು ಮುಂದೆ ಬಂದಿತ್ತು. ಗುಜರಾತ್‌ನ ಅಹಮದಾಬಾದ್‌ನಲ್ಲಿ 257 ಕೋಟಿ ರೂ. ವೆಚ್ಚದಲ್ಲಿ 13 ಸಾವಿರ ಚ. ಮೀಟರ್ ವಿಸ್ತೀರ್ಣದಲ್ಲಿ ವೈವಿಧ್ಯಮಯ ಹಾಗೂ ಆಕರ್ಷಕ ಮತ್ಸಾೃಗಾರ ವಿಜ್ಞಾನ ಉದ್ಯಾನವನ್ನು (ಅಕ್ವಾಟಿಕ್ ಲೈಫ್ ಸೈನ್ಸ್ ಪಾರ್ಕ್) ಈ ಕಂಪನಿ ನಿರ್ಮಿಸಿದೆ. ಈ ಸಂಸ್ಥೆ ವಿವಿಧ ದೇಶಗಳಲ್ಲೂ 24 ಬೃಹತ್ ಅಕ್ವೇರಿಯಂ ಸ್ಥಾಪಿಸಿರುವ ಅನುಭವ ಹೊಂದಿದೆ. ನುರಿತ ತಂತ್ರಜ್ಞರನ್ನು ಹೊಂದಿರುವ ಈ ಸಂಸ್ಥೆ ಮೈಸೂರು ಮೃಗಾಲಯದ ಮತ್ಸಾೃಗಾರವನ್ನು ನಿರ್ಮಿಸಿಕೊಡಲು ಉತ್ಸುಕವಾಗಿತ್ತು. ವಿನ್ಯಾಸ ಹಾಗೂ ಇನ್ನಿತರ ಮಾಹಿತಿ ಒಳಗೊಂಡ ವರದಿಯನ್ನೂ ನೀಡಿತ್ತು. ಇದನ್ನು ಆಧರಿಸಿ ಮೃಗಾಲಯ ಪ್ರಸ್ತಾವನೆ ತಯಾರು ಮಾಡಿ 2020ರಲ್ಲೇ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಆ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಇಂತಹ ವಿಳಂಬದಿಂದ ಈ ಕಂಪನಿ ಕೂಡ ಇದೀಗ ಮನಸ್ಸು ಬದಲಿಸಿದೆ.
ಮೃಗಾಲಯದ ಮತ್ಸಾೃಗಾರ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಅದಕ್ಕೆ ಒಪ್ಪಿಗೆ ದೊರೆಯುತ್ತದೆಯೋ ಇಲ್ಲವೋ ಎಂಬುದೆಲ್ಲ ನನಗೇನೂ ತಿಳಿದಿಲ್ಲ. ಮುಂದೆ ಏನಾಯಿತು ಎಂಬುದು ಕೂಡ ಗೊತ್ತಿಲ್ಲ.ಅಜಿತ್ ಎಂ.ಕುಲಕರ್ಣಿಕಾರ್ಯನಿರ್ವಾಹಕ ಕಾರ್ಯದರ್ಶಿ, ಶ್ರೀ ಚಾಮರಾಜೇಂದ್ರ ಮೃಗಾಲಯ
ಅ.18ರಂದು ಹಂಪಿಯ ಹಂಪಾಪುರದಲ್ಲಿ ನಡೆಯುವ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡಲಾಗುವುದು. ಜತೆಗೆ, ಮತ್ಸಾೃಗಾರವನ್ನು ಖಾಸಗಿ ಸಂಸ್ಥೆಗೆ ವಹಿಸುವ ಆಲೋಚನೆಯೂ ಇದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದುಎಂ.ಶಿವಕುಮಾರ್ ಅಧ್ಯಕ್ಷಕರ್ನಾಟಕ ಮೃಗಾಲಯ ಪ್ರಾಧಿಕಾರ