ಪಾಳು ಬಿದ್ದಿವೆ ಕಟ್ಟಡಗಳು

26SGN01
Published on

ಗೌಡಪ್ಪ ಬನ್ನಿ ಶಿಗ್ಗಾಂವಿ

ಪಟ್ಟಣದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ವಣವಾದ ಬೃಹತ್ ಕಟ್ಟಡ ಹಲವು ದಿನಗಳಿಂದ ಖಾಲಿ ಬಿದ್ದಿವೆ. ದಿನ ಕಳೆದಂತೆ ನಿರ್ವಹಣೆ ಇಲ್ಲದೆ ಶಿಥಿಲಗೊಳ್ಳುವ ಜತೆಗೆ ದುರ್ಬಳಕೆಯಾಗುತ್ತಿದೆ.

ತಾಲೂಕಿನ ಜನತೆಗೆ ಹಲವು ವರ್ಷಗಳ ಕಾಲ ನ್ಯಾಯದಾನದ ಸ್ಥಳವಾಗಿದ್ದ ಕಟ್ಟಡವನ್ನು ನಂತರ ತಾತ್ಕಾಲಿಕವಾಗಿ ಪಶು ಸಂಗೋಪನಾ ಪಾಲಿಟೆಕ್ನಿಕ್​ಗೆ ನೀಡಲಾಗಿತ್ತು. ಕೆಲವು ತಿಂಗಳ ಹಿಂದೆ ಪಾಲಿಟೆಕ್ನಿಕ್ ಕೂಡ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಅಂದಿನಿಂದ 12 ಕೊಠಡಿ ಒಳಗೊಂಡ ಬೃಹತ್ ಕಟ್ಟಡ ಅನಾಥವಾಗಿ ಅನೈತಿಕ ಚಟುವಟಿಕೆಗೆ ಆಶ್ರಯ ತಾಣವಾಗಿದೆ.

ತಾಲೂಕು ಪಂಚಾಯಿತಿ ಪಕ್ಕದಲ್ಲಿರುವ ಈ ಕಟ್ಟಡವನ್ನು ತಾಪಂ ಆಡಳಿತ ಕಚೇರಿಗೆ, ಶಾಸಕರ ಜನಸಂಪರ್ಕ ಕಚೇರಿಗೆ ಬಂದು ಹೋಗುವವರು ಬೈಕ್ ನಿಲ್ಲಿಸುವ ಸ್ಥಳ ಮಾಡಿಕೊಂಡಿದ್ದಾರೆ. ರಾತ್ರಿ ಹೊತ್ತು ನಿರ್ಜನ ಪ್ರದೇಶದಂತೆ ಭಾಸವಾಗುವ ಈ ಕಟ್ಟಡವು ಕುಡುಕರಿಗೆ ಮೋಜಿನ ಸ್ಥಳವಾಗಿದೆ. ತಾಪಂ ಆವರಣದಲ್ಲಿರುವ ಅಧ್ಯಕ್ಷ-ಉಪಾಧ್ಯಕ್ಷರ ಎರಡು ಕೊಠಡಿ ಹೊಂದಿದ ಹಳೇ ಕಟ್ಟಡವೊಂದು ಬಳಕೆ ಇಲ್ಲದೆ ಪಾಳು ಬಿದ್ದಿದೆ. ಕಚೇರಿ ಹಿಂಭಾಗದಲ್ಲಿರುವ ಸಿಬ್ಬಂದಿ ವಸತಿ ಗೃಹಗಳಂತೂ ಶಿಥಿಲಗೊಂಡು ಬಿದ್ದು ಹೋಗಿವೆ. ಹೀಗಾಗಿ, ತಾಪಂನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಲಕ್ಷಾಂತರ ರೂ. ಬಾಡಿಗೆ ಹೊರೆ: ಸರ್ಕಾರಿ ಕಟ್ಟಡ ಲಭ್ಯವಿದ್ದರೂ ಸರ್ಕಾರದ ವಿವಿಧ ಇಲಾಖೆ ತಾಲೂಕು ಮಟ್ಟದ ಕಚೇರಿಗಳು ಪಟ್ಟಣದ ವಿವಿಧೆಡೆ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ಅಬಕಾರಿ ಇಲಾಖೆ, ಕಾರ್ವಿುಕ ಇಲಾಖೆ ಸೇರಿ ಹತ್ತಾರು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಸುಮಾರು ವರ್ಷಗಳಿಂದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಹೊರೆಯಾಗುತ್ತಿದೆ. ಅಲ್ಲದೆ, ಪಟ್ಟಣದಲ್ಲಿ ವಿವಿಧೆಡೆ ಚದುರಿರುವ ಸರ್ಕಾರಿ ಕಚೇರಿಗಳಿಗೆ ಓಡಾಡುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಾಡಿಗೆ ಕಟ್ಟಡದಲ್ಲಿರುವ ರೇಷ್ಮೆ, ಮೀನುಗಾರಿಕೆ, ಹಿಂದುಳಿದ ವರ್ಗ, ಕೈಗಾರಿಕೆ ಇಲಾಖೆ ಕಚೇರಿಗಳು ಎಲ್ಲಿವೆ ಎನ್ನುವುದೇ ಗೊತ್ತಾಗುತ್ತಿಲ್ಲ.

ಒಂದೆಡೆ ಸರ್ಕಾರಿ ಕಚೇರಿಗಳು: ತಾಲೂಕು ಪಂಚಾಯಿತಿ ಆವರಣದಲ್ಲಿ ಹಳೇ ನ್ಯಾಯಾಲಯದ ಕಟ್ಟಡವನ್ನು ಸಣ್ಣಪುಟ್ಟ ದುರಸ್ತಿ ಮಾಡಿದರೆ, ಬಾಡಿಗೆಗೆ ಇರುವ ಹಲವು ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿ ಒಂದೆಡೆ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬಹುದಾಗಿದೆ. ಎಲ್ಲ ಕಚೇರಿಗಳು ಒಂದೆಡೆಯಾದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ವಸತಿ ಗೃಹಗಳ ದುರಸ್ತಿಗೆ ಕ್ರಮ ಕೈಗೊಂಡಿದ್ದಾದಲ್ಲಿ ಸಿಬ್ಬಂದಿಗೂ ಸಹಾಯವಾಗುತ್ತದೆ. ಆದ್ದರಿಂದ ತಾಪಂ ಆಡಳಿತ, ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂಬುದು ಜನರ ಒತ್ತಾಯವಾಗಿದೆ.

ಶಿಗ್ಗಾಂವಿ ತಾ.ಪಂ. ವ್ಯಾಪ್ತಿಯ ಹಳೇ ಕಟ್ಟಡಗಳು ನಿರುಪಯುಕ್ತವಾಗಲು ಬಿಡದೆ ಬಾಡಿಗೆ ಕಟ್ಟಡಗಳಲ್ಲಿರುವ ಇಲಾಖೆಗಳು ಬರಲು ಇಚ್ಛಿಸಿದರೆ ಅನುಕೂಲ ಮಾಡಲಾಗುವುದು. ಹಳೇ ತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿನ ಕೆಲವು ಕಚೇರಿಗಳಿಗೆ ಹಳೇ ಕೋರ್ಟ್ ಕಟ್ಟಡದ ಕೊಠಡಿಗಳನ್ನು ನೀಡಲಾಗಿದೆ. ಕಟ್ಟಡದ ಅವುಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. | ಪ್ರಶಾಂತ ತುರಕಾಣಿ, ಶಿಗ್ಗಾಂವಿ ತಾ.ಪಂ. ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net