ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕನಿಷ್ಠ ನಾಲ್ಕು ಕೋರ್ಸ್

KDR minis
ಕಡೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡದ ನಾಮಫಲಕವನ್ನು ಸಚಿವ ಡಾ. ಎಂ.ಸಿ.ಸುಧಾಕರ್ ಉದ್ಘಾಟಿಸಿದರು. ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಅಂಶುಮಂತ್, ಶರತ್‌ಕೃಷ್ಣಮೂರ್ತಿ, ಸೋಮಶೇಖರ್ ಇತರರಿದ್ದರು. ಕಡೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡದ ನಾಮಫಲಕವನ್ನು ಸಚಿವ ಡಾ. ಎಂ.ಸಿ.ಸುಧಾಕರ್ ಉದ್ಘಾಟಿಸಿದರು. ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಅಂಶುಮಂತ್, ಶರತ್‌ಕೃಷ್ಣಮೂರ್ತಿ, ಸೋಮಶೇಖರ್ ಇತರರಿದ್ದರು.
Published on

ಕಡೂರು: ರಾಜ್ಯದ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕನಿಷ್ಠ ನಾಲ್ಕು ವಿಷಯಗಳ ಕೋರ್ಸ್ ಇರುವಂತೆ ನಿರ್ಧಾರ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.

ಮಂಗಳವಾರ ಹರುವನಹಳ್ಳಿ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಣ್ಣ ಪಟ್ಟಣಗಳಲ್ಲೂ ಉನ್ನತ ತಾಂತ್ರಿಕ ಶಿಕ್ಷಣಕ್ಕೆ ಅವಕಾಶ ದೊರೆಯಬೇಕೆಂಬುದು ಸರ್ಕಾರದ ಆಶಯ. ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ರಾಜ್ಯದಲ್ಲಿ ಹಲವಾರು ಕಡೆ ಪಾಲಿಟೆಕ್ನಿಕ್ ಆರಂಭಿಸಿ ಅಲ್ಲಿ ಕೇವಲ ಒಂದು ವಿಷಯದ ಕೋರ್ಸ್‌ಗೆ ಅವಕಾಶ ನೀಡಲಾಗಿತ್ತು. ಕೆಲ ಪಾಲಿಟೆಕ್ನಿಕ್‌ಗಳಲ್ಲಿ ಆರೇಳು ವಿಷಯಗಳ ಕೋರ್ಸ್ ಇದ್ದರೆ ಕೆಲವೆಡೆ ಒಂದೇ ವಿಷಯಕ್ಕೆ ಅವಕಾಶವಿತ್ತು. ದೂರದೃಷ್ಟಿ ಕೊರತೆ ಇಲ್ಲಿ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದರು.

ಇಂಥ ತಾರತಮ್ಯ ನೀತಿ ನನ್ನ ಗಮನಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಪ್ರತಿ ಪಾಲಿಟೆಕ್ನಿಕ್‌ನಲ್ಲಿ ಕನಿಷ್ಠ ನಾಲ್ಕು ವಿಷಯಗಳ ಅಧ್ಯಯನಕ್ಕೆ ಅವಕಾಶ ನೀಡುವ ನಿರ್ಧಾರ ಮಾಡಿದ್ದು, ತಾಂತ್ರಿಕ ಶಿಕ್ಷಣ ಮಂಡಳಿಗೂ ನಿರ್ಧಾರ ತಿಳಿಸಲಾಗಿದೆ. ಇಲ್ಲಿನ ಪಾಲಿಟೆಕ್ನಿಕ್‌ನಲ್ಲಿ ಬೇಡಿಕೆಯಂತೆ ಮೆಕ್ಯಾನಿಕಲ್ ಕೋರ್ಸ್ ಆರಂಭಕ್ಕೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದರ ಜತೆ ಶಾಸಕ ಕೆ.ಎಸ್.ಆನಂದ್ ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂದರು.

ಯಾವುದೇ ಕ್ಷೇತ್ರ ಅಭಿವೃದ್ಧಿಯಾಗಲು ಶಿಕ್ಷಣ ಮುಖ್ಯವಾಗಲಿದೆ. ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಹೆಚ್ಚಿನ ಆದ್ಯ ನೀಡಲಾಗಿದೆ. ಕಡೂರಿನಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಜಿಟಿಟಿಸಿ, ಜೆಒಸಿ ವಿದ್ಯಾಲಯಗಳಿರುವುದರ ಜತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸಹ ಮಂಜೂರಾದರೆ ಪರಿಪೂರ್ಣ ಟೆಕ್ನಿಕಲ್ ಹಬ್ ನಿರ್ಮಾಣವಾಗಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ದೊರೆಯುತ್ತದೆ. ಈ ನಿಟ್ಟಿನಲ್ಲಿ ಕಡೂರಿಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಬೇಕು. ಪಾಲಿಟೆಕ್ನಿಕ್‌ನಲ್ಲಿ ಮುಖ್ಯವಾಗಿ ಕಾಂಪೌಂಡ್ ಮತ್ತಿತರ ಮೂಲ ಸೌಕರ್ಯಕ್ಕಾಗಿ 50 ಲಕ್ಷ ಮಂಜೂರು ಮಾಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ಮನವಿ ಮಾಡಿದರು.

ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಪಾಲಿಟೆಕ್ನಿಕ್ ಪ್ರಾಚಾರ್ಯ ಉಮಾಮಹೇಶ್ವರ್, ಗ್ರಾಪಂ ಅಧ್ಯಕ್ಷೆ ಸುಧಾ ಲೇಪಾಕ್ಷಿ, ಕಾಲೇಜಿಗೆ ರಸ್ತೆ ಸಂಪರ್ಕಕ್ಕೆ ಜಾಗ ಕಲ್ಪಿಸಿದ ದಾನಿಗಳಾದ ಹರುವನಹಳ್ಳಿ ಬಸಪ್ಪ ಮತ್ತು ರಾಮಣ್ಣ ಹಾಗೂ ಮೋಹನ್, ಶೇಖರಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net