

ಹುಬ್ಬಳ್ಳಿ: ಅವಳಿ ನಗರದಲ್ಲಿ ಬಿಡಾಡಿ ಜಾನುವಾರು ಹಾಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಕುರಿತು ರ್ಚಚಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜು. 19ರಂದು ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ಸಭೆ ಕರೆದಿದೆ.
ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಸಭೆ ನಡೆಯಲಿದೆ.
ಹುಬ್ಬಳ್ಳಿ-ಧಾರವಾಡ ದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳ ಓಡಾಟ ಹೆಚ್ಚಾಗಿದ್ದು, ನಾಗರಿಕರು ತೊಂದರೆ ಎದುರಿಸುವಂತಾಗಿದೆ. ಸುಗಮ ಸಂಚಾರ ಹಾಗೂ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ಅಪಘಾತಗಳು ಸಂಭವಿಸುತ್ತಿವೆ. ಬೀದಿ ನಾಯಿಗಳು ಸಾರ್ವಜನಿಕರು ಮತ್ತು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಕೆಲ ದಿನಗಳ ಹಿಂದೆ ಹಳೇ ಹುಬ್ಬಳ್ಳಿ ಸಿಮ್ಲಾನಗರದಲ್ಲಿ 9 ವರ್ಷದ ಬಾಲಕಿ ಮೇಲೆ ಎರಡು ಬೀದಿ ನಾಯಿಗಳು ದಾಳಿ ನಡೆಸಿದ್ದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಕರೆದಿರುವ ಸಭೆ ಮಹತ್ವ ಪಡೆದುಕೊಂಡಿದೆ.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಸದಸ್ಯರು, ಆಯುಕ್ತ ಡಾ. ರುದ್ರೇಶ ಘಾಳಿ, ಹೆಚ್ಚುವರಿ ಆಯುಕ್ತ ಆರ್. ವಿಜಯಕುಮಾರ್, ಪಾಲಿಕೆ ಅಧಿಕಾರಿಗಳು, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುವರು. ಸಭೆಯಲ್ಲಿ ಸಾರ್ವಜನಿಕರು ಕೂಡ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.