

ಕಲಬುರಗಿ: ನಗರದ ವಾರ್ಡ್ ೫ ರ ವ್ಯಾಪ್ತಿಯ ಭವಾನಿ ನಗರದಲ್ಲಿ ಮಹಾನಗರ ಪಾಲಿಕೆಯಿಂದ ಜನಸ್ಪಂದನ, ಡೆಂಘೆ ಜನಜಾಗೃತಿ ಶುಕ್ರವಾರ ನಡೆಯಿತು. ಜನರಿಗೆ ಆಸ್ತಿ ತೆರಿಗೆ ಶೇ.೫ ರಿಯಾಯಿತಿ, ಡೆಂಘೆ ಜಾಗೃತಿ ಮೂಡಿಸಲಾಯಿತು.
ಸಾರ್ವಜನಿಕರು ಪಾಲಿಕೆಯಿಂದ ಮನೆ- ಮನೆಗೆ ಬಂದು ಕಸ ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ. ಭಾನುವಾರ ಕಸ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು. ಕುಡಿಯುವ ನೀರು ೧೦, ೧೫ದಿನಕ್ಕೊಮ್ಮೆ ಬರುತ್ತಿದೆ. ಸಮಸ್ಯೆ ಬಗೆಹರಿಸಿ ಎಂದು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರು.
ಪಾಲಿಕೆ ವಲಯ ಕಚೇರಿ ೨ರ ಆಯುಕ್ತ ಉಮೇಶ ಚವ್ಹಾಣ್ ತಮ್ಮ ವ್ಯಾಪ್ತಿಯ ಸಮಸ್ಯೆಗೆ ತಕ್ಷಣ ಸ್ಪಂದಿಸಲಾಗುವುದು. ದೊಡ್ಡ ಬೇಡಿಕೆಗಳನ್ನು ಪಾಲಿಕೆ ಆಯುಕ್ತರ ಗಮನಕ್ಕೆ ತಂದು ಪರಿಹಾರ ನೀಡಲಾಗುವುದು ಎಂದರು.
ಪಾಲಿಕೆ ಸದಸ್ಯೆ ಗಂಗಮ್ಮ ಬಿರಾದಾರ ಚಾಲನೆ ನೀಡಿದರು. ಕಂದಾಯ ಅಧಿಕಾರಿ ಗುರುನಾಥ ಕೊಲ್ಲೂರ, ಆರೋಗ್ಯ ಶಾಖೆಯ ಶರಣ ಕುಮಾರ ತೆಂಗಳಿ ಇತರರಿದ್ದರು.