

ದಾವಣಗೆರೆ: ಮೇಯರ್ ಜಯಮ್ಮ ಗೋಪಿನಾಯ್ಕ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಗರಪಾಲಿಕೆಯ ಸಾಮಾನ್ಯ ಸಭೆ, ನಾಮಕರಣ ಹಗ್ಗಜಗ್ಗಾಟಕ್ಕೆ ವೇದಿಕೆಯಾಯಿತು. ಮೂರೂವರೆ ತಿಂಗಳ ನಂತರದ ಈ ಸಭೆಯಲ್ಲಿ ಅಭಿವೃದ್ಧಿ ವಿಚಾರಗಳು ಹೆಚ್ಚು ಚರ್ಚೆಯಾಗಲಿಲ್ಲ. ಬದಲಾಗಿ ತಮ್ಮ ನಾಯಕರ ಪರ ತಾಸುಗಟ್ಟಲೇ ಬ್ಯಾಟಿಂಗ್ ಮಾಡಿದರು.
ಶಾಮನೂರು ಸಮೀಪದ ಶಿವ-ಪಾರ್ವತಿ ಬಡಾವಣೆಗೆ ಜಿ.ಮಲ್ಲಿಕಾರ್ಜುನಪ್ಪ ಅವರ ಹೆಸರಿಟ್ಟ ಬಿಜೆಪಿ ನಿರ್ಧಾರದ ಬಗ್ಗೆ ವಿಪಕ್ಷನಾಯಕ ಗಡಿಗುಡಾಳ್ ಮಂಜುನಾಥ್, ಸದಸ್ಯ ಎ.ನಾಗರಾಜ್ ಆಕ್ಷೇಪಿಸಿದರು.
ಅನೇಕರು ಶಿವಪಾರ್ವತಿ ಬಡಾವಣೆ ಹೆಸರಿನಡಿ ದಾಖಲಾತಿಗಳನ್ನು ಹೊಂದಿದ್ದಾರೆ. ಬಡಾವಣೆ ಹೆಸರು ಬದಲಾದರೆ ಅವನ್ನೆಲ್ಲ ಬದಲಿಸುವುದು ಕಷ್ಟವಾಗಲಿದೆ. ಚರ್ಚೆಗಳಿಲ್ಲದೆ ನಿರ್ಧರಿಸುವುದು ಸರಿಯಿಲ್ಲ. ದೇವರ ಹೆಸರಿಗೆ ವಿರೋಧವೇಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯರಾದ ಎಸ್.ಟಿ.ವೀರೇಶ್ ಸ್ಥಾಯಿ ಸಮಿತಿಯಿಂದ ಸಾಮಾನ್ಯ ಸಭೆವರೆಗೆ ಚರ್ಚಿಸಿ ಕಾನೂನಾತ್ಮಕವಾಗಿಯೇ ಹೆಸರಿಡಲಾಗಿದೆ. ಒಂದಿಬ್ಬರ ವಿರೋಧ ಇರಬಹುದು ಎಂದು ಪ್ರತಿಕ್ರಿಯಿಸಿದರು. ಕಾಂಗ್ರೆಸ್ ನಾಯಕರೊಬ್ಬರ ಹೆಸರನ್ನು ಎಲ್ಲ ರಸ್ತೆ, ವೃತ್ತಗಳಿಗೂ ಈ ಹಿಂದೆ ಆಡಳಿತದಲ್ಲಿದ್ದವರು ಇರಿಸಿದ್ದು ಸರಿಯಾ? ಎಂದು ಬಿ.ಜಿ.ಅಜಯಕುಮಾರ್ ಪ್ರಶ್ನಿಸಿದರು.
ಬಡಾವಣೆ ಹೆಸರು ಸರ್ಕಾರದಿಂದ ಅನುಮೋದನೆಯಾಗಿದೆ. ವಿರೋಧವಿದ್ದವರು ಕಾನೂನಾತ್ಮಕವಾಗಿ ಹೋರಾಟ ಮಾಡಬಹುದು ಎಂದು ಕೆ. ಪ್ರಸನ್ನಕುಮಾರ್ ಹೇಳಿದರು. ಸೋಗಿ ಶಾಂತಕುಮಾರ್, ಕೆ.ಎಂ. ವೀರೇಶ್ ದನಿಗೂಡಿಸಿದರು.
ಬಹುಮತ ನಿಮ್ಮದೇ ಆಗಿರುವಾಗ ಎಲ್ಲ ಬಡಾವಣೆಗೂ ಒಂದೊಂದು ಹೆಸರಿಡಿ. ಮೇಯರ್, ಆಯುಕ್ತರು ಸ್ಥಳ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಂತೆ ಬಡಾವಣೆ ಅನುಮೋದಿತ ಆದೇಶಪತ್ರ ಬಂದ ಬಳಿಕವೂ ‘ನಾಗರಿಕರ ಹಿತದೃಷ್ಟಿಯಿಂದ ಮರುಪರಿಶೀಲನೆ ನಡೆಸಬೇಕು’ ಎಂದೂ ಆಯುಕ್ತರಲ್ಲಿ ಮನವಿ ಮಾಡಿದರು.
ದಾವಣಗೆರೆಯ ಖಾಸಗಿ ಬಸ್ ನಿಲ್ದಾಣದ ಏಜೆಂಟರು, ಚಾಲಕರ ಸಂಘದ ಮನವಿ ಮೇರೆಗೆ , ನಿಲ್ದಾಣಕ್ಕೆ ನಗರಕ್ಕೆ ಸಾಕಷ್ಟು ಕೊಡುಗೆ ನೀಡಿದ ಹಿರಿಯ ಮುತ್ಸದ್ದಿ ಡಾ. ಶಾಮನೂರು ಶಿವಶಂಕರಪ್ಪ ಅವರ ಹೆಸರಿಡಲು 2005-6ನೇ ಸಾಲಿನ ನಗರಸಭೆ ಅವಧಿಯಲ್ಲೇ ಠರಾವಾಗಿದೆ. ಸರ್ಕಾರದಿಂದಲೂ ಆದೇಶವಾಗಿತ್ತು. ಈಗ ಬೇರೊಬ್ಬರ ನಾಮಕರಣ ಮಾಡಲು ಮಾಡುವುದು ಹಿಂದಿನ ಕೌನ್ಸಿಲ್ ಸಭೆ ನಿರ್ಣಯಕ್ಕೆ ವಿರೋಧವಾಗಲಿದೆ. ದ್ವೇಷದ ರಾಜಕಾರಣವಾಗಲಿದೆ ಎಂದು ಎ.ನಾಗರಾಜ್ ಆಕ್ಷೇಪಿಸಿದರು. ಗಡಿಗುಡಾಳ್ ಮಂಜುನಾಥ್, ಕೆ. ಚಮನ್‌ಸಾಬ್, ಅಬ್ದುಲ್ ಲತೀಫ್, ಮೀನಾಕ್ಷಿ ಜಗದೀಶ್ ದನಿಗೂಡಿಸಿದರು.
ಬದುಕಿದ್ದ ವ್ಯಕ್ತಿ ಹೆಸರನ್ನು ಸರ್ಕಾರಿ ಹಾಗೂ ಇತರೆ ಸಂಸ್ಥೆಗಳಿಗೆ ನಾಮಕರಣ ಮಾಡುವಂತಿಲ್ಲ. ಹೀಗಾಗಿ ಖಾಸಗಿ ಬಸ್ ನಿಲ್ದಾಣದ ನವೀಕೃತ ಕಾಮಗಾರಿಗೆ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಎಸ್.ಟಿ.ವೀರೇಶ್, ಕೆ. ಪ್ರಸನ್ನಕುಮಾರ್ ಹೇಳಿದರು.
ಶಾಮನೂರು ಶಿವಶಂಕರಪ್ಪ ಹೊರತಾಗಿ ಬೇರಾರೂ ಸ್ಫೂರ್ತಿದಾಯಕ ವ್ಯಕ್ತಿಗಳಿಲ್ಲವಾ.200 ವರ್ಷದ ಹಿಂದಿದ್ದ ದಾನಿಗಳು ನೆನಪಿಲ್ಲವಾ. ದಾವಣಗೆರೆ ತುಂಬೆಲ್ಲ ಒಬ್ಬರೇ ವ್ಯಕ್ತಿಯ ಹೆಸರನ್ನು ರಸ್ತೆ, ವೃತ್ತ, ಬಡಾವಣೆಗೆ ಇರಿಸಿದರೆ ಜನರಲ್ಲಿ ಗೊಂದಲ ಆಗಲಿದೆ ಎಂದು ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್ ಹೇಳಿದರು.
ಹೊಸ ಬಸ್ ನಿಲ್ದಾಣ ಅಥವಾ ಹೊಸ ಕಟ್ಟಡಕ್ಕೆ ಯಾರ ಹೆಸರನ್ನಾದರೂ ಇರಿಸಿ. ಈ ಹಿಂದೆ ಸರ್ಕಾರ ನಿರ್ಣಯಿಸಿದ್ದ ಹೆಸರು ಬದಲಾಯಿಸಬಾರದು. ಈ ಬಗ್ಗೆ ಆದೇಶ ಪತ್ರ ನೀಡಲು ಒಂದು ತಿಂಗಳ ಕಾಲಾವಕಾಶ ನೀಡಿ. ಇಲ್ಲವಾದಲ್ಲಿ ಸಭೆ ಮುಂದೂಡಿ ಎಂದು ಕಾಂಗ್ರೆಸ್ಸಿಗರು ಪಟ್ಟು ಹಿಡಿದರು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದಾರೆ. ಹಾಗಾದರೆ ಅದನ್ನು ನೀವು ವಿರೋಧಿಸಿ ನೋಡೋಣ ಎಂದೂ ಸವಾಲು ಹಾಕಿದರು.