ಪಾಲಿಕೆಯಲ್ಲಿ ತೆರಿಗೆ ಸಂಗ್ರಹ ಟಾರ್ಗೆಟ್ ; ಕರೊನಾ ಅಲೆಗೆ ಜನ ತತ್ತರ ; ಪ್ರತೀ ವಾರ್ಡ್‌ನಿಂದ 50 ಲಕ್ಷ ರೂ. ತೆರಿಗೆ ವಸೂಲಿಗೆ ಒತ್ತಡ

25Tmk_Palike_Google_Meeting
Published on

ತುಮಕೂರು : ಕರೊನಾಘಾತ ಸಂದರ್ಭದಲ್ಲಿ ತೆರಿಗೆ ಸಂಗ್ರಹಿಸುವಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಪಾಲಿಕೆ ಟಾರ್ಗೆಟ್ ನೀಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಜನತಾ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನರ ದುಡಿಮೆಗೆ ದೊಡ್ಡ ಪೆಟ್ಟುಬಿದ್ದಿದೆ. ಎಲ್ಲ ವಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ‘ತೆರಿಗೆ’ ಪಾವತಿಗೆ ಜೂನ್ ಅಂತ್ಯದವರೆಗೆ ಶೇ.5 ರಿಯಾಯಿತಿ ನೀಡಿರುವ ಪಾಲಿಕೆಯು ಮತ್ತೊಂದೆಡೆ ತನ್ನ ಸಿಬ್ಬಂದಿ ಮೇಲೆ ತೆರಿಗೆ ಸಂಗ್ರಹ ಗುರಿಮುಟ್ಟುವಂತೆ ತೀವ್ರ ಒತ್ತಡ ಹಾಕಿದೆ. ಕಂದಾಯ ಶಾಖೆ ಸಿಬ್ಬಂದಿಗೆ ಮೌಖಿಕ ಸೂಚನೆ ನೀಡಿರುವುದು ಕಂಡುಬಂದಿದೆ.

14 ಕೋಟಿಯಿಂದ 2 ಕೋಟಿಗೆ ಕುಸಿತ: ಪಾಲಿಕೆ ತೆರಿಗೆ ಸಂಗ್ರಹದಲ್ಲಿ 2020-21 ನೇ ಸಾಲಿನ ಆರ್ಥಿಕ ವರ್ಷಾರಂಭದಲ್ಲಿ ಕರೊನಾತಂಕ ಇದ್ದರೂ ಉತ್ತಮ ಸ್ಪಂದನೆ ಸಿಕ್ಕಿತ್ತು. ಶೇ.5 ರಿಯಾಯಿತಿ ಪ್ರಯೋಜನವನ್ನು ಬಳಸಿಕೊಳ್ಳಲು ಸ್ವಯಂಪ್ರೇರಿತರಾಗಿ ತುಮಕೂರಿಗರು ತೆರಿಗೆ ಪಾವತಿಸಿದ್ದು ಏಪ್ರಿಲ್‌ನಲ್ಲಿ 14 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ಕರೊನಾರ್ಭಟಕ್ಕೆ ಕಡಿವಾಣ ಹಾಕಲು ಸರ್ಕಾರವು ಏಪ್ರಿಲ್ ಅಂತ್ಯದಲ್ಲಿ ಲಾಕ್‌ಡೌನ್ ಘೋಷಿಸಿತು. ಬಳಿಕ ವಾಣಿಜ್ಯ, ಕೈಗಾರಿಕೆ ಸೇರಿ ಎಲ್ಲ ವಲಯಗಳ ಆದಾಯ ಖೋತಾ ಆಯಿತು. ಮೇ ನಲ್ಲಿ ತೆರಿಗೆ ಸಂಗ್ರಹ ಸಂಪೂರ್ಣ ಕುಸಿಯಿತು. 2 ಕೋಟಿಯಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ. ಆನ್ ಲೈನ್ ಸೌಲಭ್ಯ, ಮನೆಬಾಗಿಲಿಗೆ ಬಿಲ್ ಕಲೆಕ್ಟರ್‌ಗಳು ಕಂದಾಯ ಸಂಗ್ರಹಣೆಯ ಯಂತ್ರದೊಂದಿಗೆ ತೆರಳಿದ್ದರೂ ಜನರು ತೆರಿಗೆ ಪಾವತಿಸಿಲ್ಲ.

50 ಲಕ್ಷ ಟಾರ್ಗೆಟ್: ತೆರಿಗೆ ಸಂಗ್ರಹ ಏಕಾಏಕಿ 2 ಕೋಟಿ ರೂ.ಗೆ ಕುಸಿದ ಪರಿಣಾಮ ಆದಾಯ ಮೂಲ ಹೆಚ್ಚಿಸಲು ಕಂದಾಯ ಇಲಾಖೆ ಸಿಬ್ಬಂದಿಗೆ ಪ್ರತೀ ವಾರ್ಡ್‌ನಿಂದ 50 ಲಕ್ಷ ರೂ. ತೆರಿಗೆ ಸಂಗ್ರಹಿಸುವ ಟಾರ್ಗೆಟ್ ನೀಡಲಾಗಿದೆ. ಕರೊನಾ ನಿಯಂತ್ರಣ ಕೆಲಸದಲ್ಲಿ ತೊಡಗಿಕೊಂಡಿರುವ ಪಾಲಿಕೆ ಸಿಬ್ಬಂದಿ ಟಾರ್ಗೆಟ್‌ನಿಂದ ಒತ್ತಡಕ್ಕೆ ಸಿಲುಕಿದ್ದಾರೆ.

ಜೂನ್‌ವರೆಗೆ ಶೇ.5ರ ರಿಯಾಯಿತಿ ಮುಂದುವರಿಸಲಾಗಿದೆ.

ಆಲ್‌ಲೈನ್ ಲಿಂಕ್ ! : ಪಾಲಿಕೆಯಲ್ಲಿ ಪ್ರಥಮ ಬಾರಿಗೆ ಹೆಚ್ಚು ಬಾಕಿ ಉಳಿಸಿಕೊಂಡಿರುವ ತೆರಿಗೆದಾರರಿಗೆ ಮೊಬೈಲ್ ಮೂಲಕ ಮೆಸೇಜ್ ಕಳುಹಿಸಲಾಗುತ್ತಿದೆಯಲ್ಲದೆ, ಆನ್‌ಲೈನ್ ಪಾವತಿಗೆ ಲಿಂಕ್ ಕೂಡ ಕಳುಹಿಸಲಾಗುತ್ತಿದೆ. ಜತೆಗೆ ಚೆಕ್ ಮೂಲಕವೂ ತೆರಿಗೆ ಪಾವತಿಸಲು ಅನುವು ಮಾಡಿಕೊಡಲಾಗಿದೆ.

5 ಪಟ್ಟು ಹೆಚ್ಚಳ : ನಿವೇಶನದ ಮೇಲಿನ ತೆರಿಗೆಯನ್ನು ಐದು ಪಟ್ಟು ಹೆಚ್ಚಳ ಮಾಡಲಾಗಿದೆ. ಸಮಾಧಾನಕರ ಅಂಶವೆಂದರೆ ಮಾರುಕಟ್ಟೆ ದರ ಆಧರಿಸಿ ತೆರಿಗೆ ವಿಧಿಸಲಾಗಿದೆ. ಪ್ರಮುಖ ವಾಣಿಜ್ಯ, ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನದ ಮಾರುಕಟ್ಟೆ ದರ ಆಧರಿಸಿ ಕಟ್ಟಡಗಳಿಗೆ ತೆರಿಗೆ ವಿಧಿಸುವ ಹೊಸ ನೀತಿ ಜಾರಿಗೆ ತರಲಾಗಿದೆ. ಈ ಹಿಂದೆ ಎಂಜಿ ರಸ್ತೆಯಲ್ಲಿ ವಿಧಿಸುತ್ತಿದ್ದ ತೆರಿಗೆಯನ್ನು ನಗರದ ಹೊರವಲಯದಲ್ಲಿ ಅಂಗಡಿಯವನಿಗೂ ವಿಧಿಸಲಾಗುತ್ತಿತ್ತು.

ನಗರದ ವಾರ್ಡ್‌ಗಳಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಇನ್ನು ಹೊರವಲಯದಲ್ಲೂ ಜನ ತೆರಿಗೆ ಪಾವತಿಸುತ್ತಿಲ್ಲ. 4 ದಿಕ್ಕುಗಳಲ್ಲಿ 4 ತಂಡಗಳನ್ನು ರಚಿಸಿ ತೆರಿಗೆ ಸಂಗ್ರಹಕ್ಕೆ ಒತ್ತುಕೊಡಬೇಕಿದೆ. ನಳಿನಾ, ಅಧ್ಯಕ್ಷೆ, ಹಣಕಾಸು, ತೆರಿಗೆ ಸ್ಥಾಯಿಸಮಿತಿ ಕಳೆದ ವರ್ಷ ಶೇ.100 ಅಂದರೆ 32 ಕೋಟಿ ರೂ., ತೆರಿಗೆ ಸಂಗ್ರಹವಾಗಿತ್ತು. ಏಪ್ರಿಲ್-ಮೇ-ಜೂನ್ ಬಳಿಕ ಪ್ರತೀ ತಿಂಗಳು ಸರಾಸರಿ 3 ಕೋಟಿ ರೂ.,ಸಂಗ್ರಹವಾಗಲಿದ್ದು ಏಪ್ರಿಲ್‌ನಲ್ಲಿ 14 ಕೋಟಿ ರೂ., ಸಂಗ್ರಹವಾಗಿತ್ತು. ಮೇನಲ್ಲಿ 2 ಕೋಟಿಗೆ ಕುಸಿದಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ರೇಣುಕಾ ಆಯುಕ್ತೆ, ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net