ಪಾಲಿಕೆಗೆ ಮುಜುಗರ ತಂದ ಬಿಲ್‌ ಬಾಕಿ

Published on

ಬಳ್ಳಾರಿ : ಗುತ್ತಿಗೆದಾರರೊಬ್ಬರ ಬಿಲ್‌ ಬಾಕಿ ಪಾವತಿಸದ ಪ್ರಕರಣದಲ್ಲಿ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯ ಪೀಠೋಪಕರಣ ವಶಕ್ಕೆ ಪಡೆಯಲು ನಗರದ ವಾಣಿಜ್ಯ ನ್ಯಾಯಾಲಯದ ಅಧಿಕಾರಿಗಳು ಮುಂದಾಗಿದ್ದರು. ಹೀಗಾಗಿ ಪಾಲಿಕೆ ಮುಜುಗರ ಎದುರಿಸಬೇಕಾದ ಪ್ರಸಂಗ ಶುಕ್ರವಾರ ನಡೆದಿದೆ.
ಈ ಹಿನ್ನೆಲೆಯಲ್ಲಿ ನಗರದ ವಾಣಿಜ್ಯ ನ್ಯಾಯಾಲಯವು ಪಾಲಿಕೆ ಆಯುಕ್ತರ ಕಚೇರಿ ಪೀಠೋಪಕರಣ ವಶಕ್ಕೆ ಪಡೆಯುವಂತೆ ಇತ್ತೀಚೆಗೆ ಸೂಚಿಸಿತ್ತು. ಅಧಿಕಾರಿಗಳು ಶುಕ್ರವಾರ ಪಾಲಿಕೆ ಕಚೇರಿಗೆ ಬಂದಿದ್ದರಾದರೂ, ಆಯುಕ್ತರು ಇರಲಿಲ್ಲ. ಬಿಲ್‌ ಪಾವತಿ ಮಾಡಲು ಸಮಯವಕಾಶ ನೀಡುವಂತೆ ಪಾಲಿಕೆಯ ಮೇಯರ್‌ ಮತ್ತು ಅಧಿಕಾರಿಗಳು ಗುತ್ತಿಗೆದಾರರು ಮತ್ತು ಕೋರ್ಟ್‌ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು. ಇದಕ್ಕೆ ಗುತ್ತಿಗೆದಾರರು ಒಪ್ಪಿದ್ದು, ಪೀಠೋಪಕರಣ ವಶಕ್ಕೆ ಪಡೆಯುವ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ.

ಏನಿದು ಘಟನೆ : ಗುತ್ತಿಗೆದಾರ ಶ್ರೀನಿವಾಸರಾಜು ಎಂಬುವವರು 2010ರಲ್ಲಿ ಪಾಲಿಕೆಯಲ್ಲಿ 4.85 ಕೋಟಿ ರೂ. ಮೊತ್ತದ ಕಾಮಗಾರಿ ಪೂರ್ಣಗೊಳಿಸಿದ್ದರು. ಹೊರವಲಯದ ವೇಣಿವೀರಾಪುರ ಬಳಿಯ ಡಂಪಿಂಗ್‌ ಯಾರ್ಡ್‌ಗೆ 2.85 ಕಿ.ಮೀ ರಸ್ತೆ ನಿರ್ಮಿಸುವ ಈ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಪಾಲಿಕೆ 3.50 ಕೋಟಿ ರೂ. ಪಾವತಿ ಮಾಡಿ ಇನ್ನುಳಿದ 1.35 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು. ಬಾಕಿ ಹಣಕ್ಕಾಗಿ 2011ರಿಂದ ಪಾಲಿಕೆ ಮತ್ತು ಗುತ್ತಿಗೆದಾರರ ನಡುವೆ ನ್ಯಾಯಾಂಗ ಹೋರಾಟ ನಡೆದಿದೆ. ಇದರಲ್ಲಿ ಗುತ್ತಿಗೆದಾರ ಶ್ರೀನಿವಾಸ ರಾಜು ಅವರಿಗೆ ಜಯ ಸಿಕ್ಕಿತ್ತು. ಅದರಂತೆ ಪಾಲಿಕೆಯೂ ಸ್ವಲ್ಪ ಹಣ ಪಾವತಿ ಮಾಡಿತ್ತಾದರೂ ಮತ್ತೆ 90.44 ಲಕ್ಷ ರೂ. ಬಾಕಿ ಉಳಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net