ಪಾಲಿಕೆಗೆ ಆದಾಯ ಸಂಗ್ರಹವೇ ದೊಡ್ಡ ಸವಾಲು!

Carporation
Published on

ಬೆಳಗಾವಿ: ಪ್ರಥಮ ಬಾರಿಗೆ ಮಹಾನಗರ ಪಾಲಿಕೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಬಿಜೆಪಿಗೆ 2023-24ನೇ ಸಾಲಿನ ಬಜೆಟ್ ಮಂಡಿಸಲು ಆದಾಯ ಕ್ರೋಢಿಕರಣವೇ ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಅಲ್ಲದೆ, ಈ ಬಾರಿ ಬಜೆಟ್ ಗಾತ್ರ 500 ಕೋಟಿ ರೂ. ಗಡಿ ತಲುಪುವ ನಿರೀಕ್ಷೆಯಿದೆ.

ಕಳೆದ ಹಲವು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದಿರುವುದು, ಅನುದಾನ ಕೊರತೆ, ಖರ್ಚು-ವೆಚ್ಚಗಳು ಅಧಿಕ ಇನ್ನಿತರ ಕಾರಣಗಳಿಂದ ಪಾಲಿಕೆಯು ಆರ್ಥಿಕ ಸಮಸ್ಯೆ ಎದುರಿಸಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಆಡಳಿತಕ್ಕೆ ಬಂದಿರುವ ಬಿಜೆಪಿ ಮೇಯರ್, ಉಪಮೇಯರ್ ಅವರಿಗೆ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಲು ಆದಾಯ ಕೊರತೆ ಎದುರಾಗಿದೆ.

ಮಹಾನಗರ ಪಾಲಿಕೆಯ ವ್ಯಾಪ್ತಿಯ 1.42 ಲಕ್ಷಕ್ಕೂ ಅಧಿಕ ಆಸ್ತಿಗಳಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. 2016ರಲ್ಲಿ 22 ಕೋಟಿ ರೂ., 2017ರಲ್ಲಿ 28 ಕೋಟಿ ರೂ.2018ರಲ್ಲಿ 35 ಕೋಟಿ ರೂ., 2019ರಲ್ಲಿ 35 ಕೋಟಿ ರೂ., 2020ರಲ್ಲಿ 39 ಕೋಟಿ ರೂ., 2021ರಲ್ಲಿ 46 ಕೋಟಿ ರೂ., 2022ರಲ್ಲಿ 50 ಕೋಟಿ ರೂ. ತೆರಿಗೆ ಆದಾಯ ಬಂದಿದೆ. ಪ್ರತಿ ವರ್ಷ 4 ರಿಂದ 5 ಕೋಟಿ ರೂ. ತೆರಿಗೆ ವಸೂಲಿ ಬಾಕಿ ಉಳಿಯುತ್ತಿದೆ. ಮತ್ತೊಂದೆಡೆ ವಾರ್ಷಿಕ ಬಜೆಟ್‌ಗಿಂತ 25 ರಿಂದ 30 ಕೋಟಿ ರೂ. ಹೊರೆಯಾಗುತ್ತಿದೆ.ಇದರಿಂದ ಆದಾಯ ನಂಬಿಕೊಂಡು ಹಾಕಿಕೊಂಡಿರುವ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ.

ಈಗಾಗಲೇ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ರಸ್ತೆ, ಚರಂಡಿ, ಬೀದಿ ದೀಪ ನಿರ್ಮಾಣ ಮಾಡಲಾಗಿದೆ. ಪರಿಣಾಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪಾಲಿಕೆಗೆ ಬರುವ ಅನುದಾನ ಬಂದ್ ಆಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ತೆರಿಗೆ ಹೆಚ್ಚಳ ಸಾಧ್ಯತೆ!

ಮಹಾನಗರ ಪಾಲಿಕೆಯ ಆದಾಯ ಹೆಚ್ಚಳ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಖರ್ಚು ವೆಚ್ಚಗಳ ನಿಯಂತ್ರಿಸಲು ನೂತನ ಆಡಳಿತ ಸದಸ್ಯರು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ವಾರ್ಡ್‌ಗಳಲ್ಲಿನ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳನ್ನು ರೂಪಿಸಲು ಆಸ್ತಿ, ಕಟ್ಟಡ, ಆಸ್ತಿ ನೋಂದಣಿ ಸೇರಿದಂತೆ ವಿವಿಧ ತೆರಿಗಳನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಇಲ್ಲವೇ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತರುವುದು ಅವಶ್ಯಕವಾಗಿದೆ. ಮೇಯರ್, ಉಪಮೇಯರ್, ಸದಸ್ಯರು ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದ ಮೇಲೆ ತೆರಿಗೆ ಹೆಚ್ಚಳ ಪ್ರಸ್ತಾವನೆ ಅಂತಿಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ 2023-24ನೇ ಸಾಲಿನ ಬಜೆಟ್ ಮಂಡನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೇಯರ್, ಉಪಮೇಯರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಗಳು ನಡೆದಿವೆ. ಈ ಬಾರಿ ಬಜೆಟ್ ಗಾತ್ರ 500 ಕೋಟಿ ರೂ. ಆಗುವ ಸಾಧ್ಯತೆಯಿದೆ. ಸಾರ್ವಜನಿಕ ಶೌಚಗೃಹಗಳ ನಿರ್ಮಾಣ, ಉದ್ಯಮಭಾಗ ಪ್ರದೇಶ ಅಭಿವೃದ್ಧಿಗೆ ಬೇಡಿಕೆಗಳು ಬಂದಿವೆ.| ಡಾ.ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net