

ಮೈಸೂರು: ಕಳೆದ 7 ತಿಂಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು ನಗರ ಮಹಾಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಈ ಎಲೆಕ್ಷನ್ ನಡೆಯುವ ಸಾಧ್ಯತೆ ಇಲ್ಲ.
ಸತತವಾಗಿ ಮೂರು ಸಲ ಈ ಚುನಾವಣೆಯನ್ನು ಮುಂದಕ್ಕೆ ಹಾಕಲಾಗಿದೆ. ಆಡಳಿತರೂಢ ಬಿಜೆಪಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕದ ಕುರಿತು ಆಸಕ್ತಿ ಇಲ್ಲ ಎಂಬುದು ಈ ಮೂಲಕ ಮತ್ತೊಮ್ಮೆ ರುಜುವಾತಾಗಿದೆ.
ಗುರುವಾರ (ಮಾ.23) ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಜನತಾದಳ ಅಧ್ಯಕ್ಷರು ಪತ್ರ ನೀಡಿ ವಿಧಾನಸಭೆ ಚುನಾವಣೆ ತುರ್ತು ಸಭೆ ಇರುವುದರಿಂದ ತಮ್ಮ ಪಕ್ಷ ಸದಸ್ಯರು ಈ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಚುನಾವಣೆಯನ್ನು ಮುಂದೂಡಲು ಸೂಚಿಸಿದ್ದಾರೆ. ಆದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ತಿಳಿವಳಿಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ
ಇನ್ನು ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿಲ್ಲ. ಜತೆಗೆ ಈ ಎಲೆಕ್ಷನ್ ಕುರಿತು ಚಟುವಟಿಕೆ ಇನ್ನೂ ಬಿರುಸುಗೊಂಡಿಲ್ಲ. ಆದ್ಯಾಗೂ, ಜೆಡಿಎಸ್ ನಡೆ ಅಚ್ಚರಿ ಮೂಡಿಸಿದೆ. ಪರೋಕ್ಷವಾಗಿ ಬಿಜೆಪಿ ಅನುಕೂಲ ಮಾಡಿಕೊಟ್ಟಿದ್ದು, ಈ ಚುನಾವಣೆ ಮಾಡಲು ಮನಸ್ಸಿಲ್ಲದ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಕಳೆದ ವರ್ಷ ಸೆ.6ರಂದು ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆದಿತ್ತು. ಅದರೊಂದಿಗೆ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಅವಿರೋಧ ಆಯ್ಕೆಯಾಗಿದೆ. ಇದಾಗಿ 6 ತಿಂಗಳು ಗತಿಸಿದರೂ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಲ್ಲೇ ಇಲ್ಲ.
ಕಳೆದ ಫೆ. 2ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಅನಾರೋಗ್ಯ ಕಾರಣ ನೀಡಿ ಮೇಯರ್ ಶಿವಕುಮಾರ್ ಕೊನೆ ಕ್ಷಣದಲ್ಲಿ ಚುನಾವಣೆಯನ್ನೇ ಮುಂದೂಡಿದ್ದರು. ಮೇಯರ್ ಈ ಧೋರಣೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆಯುಕ್ತರ ಕಚೇರಿಗೆ ಬೀಗ ಹಾಕಿ ತೀವ್ರ ಅಸಮಾಧಾನ ಹೊರಹಾಕಿದ್ದರು. ಎರಡು ದಿನ ಪ್ರತಿಭಟನೆ ನಡೆಸಿದ ಬಳಿಕ ಕಾಂಗ್ರೆಸ್ ಸದಸ್ಯರು, ಪ್ರಾದೇಶಿಕ ಆಯುಕ್ತರಿಗೆ ದೂರು ಸಹ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸಲು ಸೂಚಿಸಿದ್ದರು. ಆ ಪ್ರಕಾರ ಮಾ.13ರಂದು ಚುನಾವಣೆ ನಿಗದಿಯಾಗಿತ್ತು. ಬಳಿಕ ಅದನ್ನೂ ಮುಂದಕ್ಕೆ ಹಾಕಲಾಯಿತು. ಮತ್ತೆ ಮಾ.23ರಂದು ನಿಗದಿ ಮಾಡಲಾಗಿತ್ತು. ಅದೀಗ ಅದನ್ನೂ ಮುಂದೂಡಲಾಗಿದೆ.
ಬಿಜೆಪಿ-ಜೆಡಿಎಸ್ ನಡುವೆ ಮೂಡದ ಒಮ್ಮತ:
ಬಿಜೆಪಿ-ಜೆಡಿಎಸ್ ನಡುವೆ ಅಧಿಕಾರ ಹಂಚಿಕೆ ಸೂತ್ರದಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿ, ಚುನಾವಣೆ ನಡೆಸಲು ಹಿಂದೇಟು ಹಾಕಲಾಗುತ್ತಿದೆ. ಪಾಲಿಕೆಯಲ್ಲಿ ಇದೇ ಮೊದಲಿಗೆ ಮೇಯರ್, ಉಪ ಮೇಯರ್ ಸ್ಥಾನಗಳು ಬಿಜೆಪಿ ಪಾಲಾಗಿವೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಜೆಡಿಎಸ್‌ಗೆ ಉಪ ಮೇಯರ್ ಸೇರಿದಂತೆ ಯಾವುದೇ ಸ್ಥಾನಮಾನ ಸಿಕ್ಕಲ್ಲ. ಆದ್ದರಿಂದ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನಾದರೂ ನಮಗೆ ಸಂಪೂರ್ಣವಾಗಿ ಬಿಟ್ಟುಕೊಡಬೇಕು ಎನ್ನುವುದು ಜೆಡಿಎಸ್ ಪಟ್ಟುಹಾಕಿದೆ. ಇದಕ್ಕೆ ಬಿಜೆಪಿ ಕಿವಿಕೊಟ್ಟಿರಲಿಲ್ಲ. ಇದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಇದುವೇ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನನೆಗುದಿಗೆ ಬೀಳಲು ಕಾರಣವಾಗಿದೆ.
ಇತ್ತೀಚೆಗೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ದಿಢೀರ್ ಜ್ಞಾನೋದಯವಾಗಿತ್ತು. ಕೊಟ್ಟ ಭರವಸೆಯಂತೆ ಜೆಡಿಎಸ್ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ಕೊನೆಗೂ ಅದು ಮುಂದಾಗಿತ್ತು. ಆದರೀಗ ಈ ಚುನಾವಣೆಯನ್ನು ಮುಂದೂಡಲು ಇದೀಗ ಜೆಡಿಎಸ್ ಕಾರಣವಾಗಿದೆ. ಬಿಜೆಪಿ, ಜೆಡಿಎಸ್‌ನ ಈ ನಡೆ ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೌನ್ಸಿಲ್ ಸಭೆಯೂ ಮುಂದೂಡಿಕೆ
ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಅಡಕತ್ತರಿಗೆ ಸಿಲುಕಿರುವುದರಿಂದ ಪಾಲಿಕೆ ಕೌನ್ಸಿಲ್ ಸಭೆ ಸಹ ನಡೆಯುತ್ತಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮುಂದೂಡಿದ ಬೆನ್ನಲ್ಲೇ ಶುಕ್ರವಾರ ನಡೆಯಬೇಕಿದ್ದ ಪಾಲಿಕೆ ಸಾಮಾನ್ಯ ಸಭೆಯನ್ನೂ ಮುಂದೂಡಲಾಗಿದೆ.
ವಿಧಾನಸಭೆ ಚುನಾವಣೆ ಮುನ್ನವೇ ಅನೇಕ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳುವುದು ಬಾಕಿ ಇದೆ. ಇದೀಗ ಈ ಕೆಲಸಗಳೆಲ್ಲ ನನೆಗುದಿಗೆ ಬೀಳಲಿವೆ. ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಮುಗಿಯುವವರೆಗೂ ಹೊಸ ಕೆಲಸವನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಸ್ಥಗಿತಗೊಳ್ಳಲಿವೆ.
ಬಜೆಟ್ ಯಾವಾಗ?:
2022-23ನೇ ಸಾಲಿನ ಆರ್ಥಿಕ ವರ್ಷ ಮುಗಿಯಲು ಒಂದು ವಾರ ಮಾತ್ರ ಬಾಕಿ ಉಳಿದಿದೆ. 2023-24ನೇ ಸಾಲಿನ ಪಾಲಿಕೆ ಬಜೆಟ್ ತಯಾರು ಮಾಡಿ, ಅದನ್ನು ಮಂಡಿಸಿ, ಅನುಮೋದನೆ ಪಡೆದುಕೊಳ್ಳಬೇಕಿದೆ. ಆದರೆ ಕೌನ್ಸಿಲ್ ಸಭೆ ಸಹ ನಡೆಯುತ್ತಿಲ್ಲ. ಇತ್ತ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯುತ್ತಿಲ್ಲ. ಹೀಗಾಗಿ ಬಜೆಟ್ ಮಂಡನೆ ಯಾವಾಗ? ಇದನ್ನು ಯಾರು ಮಂಡಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.