

ಕಲಬುರಗಿ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಸಾಮೂಹಿಕ ಗೈರಾಗಿ, ಮೇಯರ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಒತ್ತಟ್ಟಿಗಾದರೆ, ಸ್ವಪಕ್ಷೀಯರ ವಿರೋಧದ ಮಧ್ಯೆ ಸಭೆ ಕರೆದ ಮೇಯರ್ ವಿಶಾಲ ದರ್ಗಿ ಪ್ರತಿಪಕ್ಷದವರ ಪ್ರಶ್ನೆಗಳಿಗೆ, ಪಾಲಿಕೆಯ ಗೊಂದಲಗಳನ್ನು ನಿರ್ವಹಿಸುವಲ್ಲಿ ಏಕಾಂಗಿಯಾಗಿ ಪರದಾಡಿದರು…
ನಗರದ ಇಂದಿರಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಬಿಜೆಪಿ ಸದಸ್ಯರ ಗೈರು, ಕ್ರಿಯಾ ಯೋಜನೆಗೆ ಅನುಮೋದನೆ, ಅಧಿಕಾರಿಗಳ ನಿರಾಸಕ್ತಿ, ಎಲ್ ಆ್ಯಂಡ್ ಟಿ ಕಳಪೆ ಕಾಮಗಾರಿ, ನಡಾವಳಿಗಳ ಬಗ್ಗೆ ಬಿಸಿ ಬಿಸಿ ಚರ್ಚೆಯಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಶೇಖ್ ಅಹ್ಮದ್ ಮಾತನಾಡಿ, ಕಲಬುರಗಿ ಪಾಲಿಕೆ ಇತಿಹಾಸದಲ್ಲಿಯೇ ಇದು ಕರಾಳ ದಿನವಾಗಿದೆ. ಮೇಯರ್ ಪಕ್ಷದವರೇ ಅಧಿಕಾರದಲ್ಲಿ ಇದ್ದರೂ ಸಭೆ ಬಿಜೆಪಿ ಸದಸ್ಯರು ಗೈರಾಗಿರುವುದು ಅವರ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ. ನಗರದ ಸಮಸ್ಯೆ ಚರ್ಚಿಸುವ ಸಭೆಗೆ ಬರುವುದಿಲ್ಲ ಎಂದರೆ ಇದರ ಅರ್ಥ ಏನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಸಚಿನ ಶಿರವಾಳ ಮಾತನಾಡಿ, ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಚುನಾವಣೆಗಾಗಿ ದಲಿತ ವ್ಯಕ್ತಿಯನ್ನು ಮೇಯರ್ ಮಾಡಿದರೂ, ಸಭೆಗೆ ಗೈರಾಗಿ ಅವರನ್ನು ಅವಮಾನ ಮಾಡುತ್ತಿದ್ದಾರೆ ಎಂದರು. ಶಿರವಾಳ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಮೋದಿ, ಜಾತಿ ಬಗ್ಗೆ ಮಾತು ಬೇಡ. ಅಭಿವೃದ್ಧಿ ಬಗ್ಗೆ ಚರ್ಚಿಸಿ. ನಾವು ನಿಮ್ಮ ರಾಷ್ಟಾçಧ್ಯಕ್ಷರು, ನಾಯಕರ ಬಗ್ಗೆ ಮಾತಾಡಬೇಕಾಗುತ್ತದೆ. ಶಬ್ಧ ಬಳಕೆ ಬಗ್ಗೆ ಇತಿ ಮಿತಿ ಇರಲಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಭೆ ಆರಂಭಕ್ಕೂ ಮುನ್ನ ಚಂದ್ರಯಾನ -೩ ಯಶಸ್ವಿಗೆ ಶ್ರಮಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಪಾಲಿಕೆ ಮಾಜಿ ಸದಸ್ಯರು, ನಗರದ ಗಣ್ಯರು, ಪಾಲಿಕೆಯ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಗಮ್ಮ ಇನಾಮದಾರ, ವಿಶಾಲ ನವರಂಗ, ರಿಯಾಜ್ ಅಹ್ಮದ್, ಸಾಜೀದ್ ಕಲ್ಯಾಣ್, ಪಾಲಿಕೆ ಆಯುಕ್ತ ದೇವಿದಾಸ ಪಾಟೀಲ್, ಅಧಿಕಾರಿಗಳಾದ ಆರ್.ಪಿ.ಜಾಧವ್ ಇತರರಿದ್ದರು. ಸಭಾ ಕಾರ್ಯದರ್ಶಿ ಸಾವಿತ್ರಿ ಸಲಗರ ನಿರ್ವಹಣೆ ಮಾಡಿದರು.