ಪಾಲಿಕೆ ಮುಖ್ಯ ಕಚೇರಿಯಲ್ಲೇ ಕೋವಿಡ್ ನಿಮಯ ಗಾಳಿಗೆ

h23-HDMC Elcection 2
Published on

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ಪಕ್ಷಗಳು ಬಹುತೇಕ ಅಭ್ಯರ್ಥಿಗಳನ್ನು ಕೊನೆ ಗಳಿಗೆಯಲ್ಲಿ ಪ್ರಕಟಿಸಿದವು. ಅಲ್ಲದೆ, ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಪಾಲಿಕೆ ಮುಖ್ಯ ಕಚೇರಿಯಲ್ಲಿಯೇ 40 ವಾರ್ಡ್​ಗಳ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಎಲ್ಲ ಕಾರಣಗಳಿಗಾಗಿ ಸೋಮವಾರ ಇಲ್ಲಿ ಜನಜಂಗುಳಿ ನೆರೆದಿತ್ತು. ಪಾಲಿಕೆಯ ಮುಖ್ಯ ಕಚೇರಿಯಲ್ಲಿಯೇ ಕೋವಿಡ್ ನಿಯಮಗಳು ಗಾಳಿಗೆ ತೂರಿದ್ದವು. ಮಾರ್ಶಲ್​ಗಳಂತೂ ಮೂಕ ಪ್ರೇಕ್ಷಕರಾಗಿದ್ದರು!

ಮಹಾನಗರ ಪಾಲಿಕೆಯ ಒಟ್ಟು ವಾರ್ಡ್​ಗಳ ಸಂಖ್ಯೆ 82. ಇದರಲ್ಲಿ ಧಾರವಾಡದಲ್ಲಿ 25 ಹಾಗೂ ಹುಬ್ಬಳ್ಳಿಯಲ್ಲಿ 57 ವಾರ್ಡ್​ಗಳಿವೆ. ನಾಮಪತ್ರ ಸಲ್ಲಿಕೆಗಾಗಿ ಐದು ವಾರ್ಡ್​ಗೊಂದರಂತೆ ಕೇಂದ್ರಗಳನ್ನು ರೂಪಿಸಲಾಗಿತ್ತು. ಧಾರವಾಡದ ಐದು ಪ್ರತ್ಯೇಕ ಸ್ಥಳಗಳಲ್ಲಿ ಇದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹುಬ್ಬಳ್ಳಿಯ ನವನಗರದ ಅಂಬೇಡ್ಕರ್ ಭವನ, 5ನೇ ವಲಯ ಕಚೇರಿ, ಹುಬ್ಬಳ್ಳಿಯ ಎಂಪ್ಲಾಯಿಸ್ ಹಾಲ್​ನಲ್ಲಿ ತಲಾ ಒಂದೊಂದು ಕೇಂದ್ರ ಮಾಡಲಾಗಿತ್ತು. ಆದರೆ, ಪಾಲಿಕೆ ಮುಖ್ಯ ಕಚೇರಿ ಆವರಣದಲ್ಲಿ 8 ಕೇಂದ್ರಗಳನ್ನು ತೆರೆಯಲಾಗಿತ್ತು. ಹೀಗಾಗಿ, ಇಲ್ಲಿ ಸೋಮವಾರ ಜನದಟ್ಟಣೆ ಏರ್ಪಟ್ಟಿತ್ತು.

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಈಗ ಸೊನ್ನೆ ಇದೆ. ಇದೇನಾದರೂ ಶೇ. 2ಕ್ಕಿಂತ ಹೆಚ್ಚಾದರೆ ಸರ್ಕಾರವು ನಿಯಮಗಳು ಬಿಗಿಗೊಳಿಸಲು ತೀರ್ವನಿಸಿದೆ. ಕೋವಿಡ್ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸರ್ಕಾರ ಇಷ್ಟೊಂದು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಮಹಾನಗರ ಪಾಲಿಕೆ ತನ್ನ ಮುಖ್ಯ ಕಚೇರಿಯಲ್ಲಿ ಈ ರೀತಿ ಜನ ಗುಂಪು ಸೇರಲು ಆಸ್ಪದ ನೀಡಿದ್ದನ್ನು ಪ್ರಜ್ಞಾವಂತರು ಖಂಡಿಸುವಂತಾಯಿತು.

ಶುಕ್ರವಾರ ಮೊಹರಂ ಕೊನೆಯ ದಿನ ಹಾಗೂ ಮಧ್ಯೆ ಭಾನುವಾರ ಬಂದಿದ್ದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಇರಲಿಲ್ಲ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೇ ದಿನವಾಗಿದ್ದರಿಂದ ಜನಸಂದಣಿ ಎಂದಿಗಿಂತ ಹೆಚ್ಚಿತ್ತು. ವಿವಿಧ ಪಕ್ಷಗಳು ಬಿ ಫಾರಂ ತಡವಾಗಿ ನೀಡಿದ್ದರಿಂದಲೂ ಜನಸಂಖ್ಯೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಿತ್ತು.

ಪಾಸಿಟಿವಿಟಿ ಪ್ರಮಾಣ ಸೊನ್ನೆ

ಧಾರವಾಡ ಜಿಲ್ಲೆಯಲ್ಲಿ ಆ. 10ರಿಂದ 22ರವರೆಗೆ ಕೋವಿಡ್ ಪಾಸಿಟಿವಿಟಿ ಪ್ರಮಾಣ ಸೊನ್ನೆ ಇದೆ. ಆ. 14ರಂದು ಮಾತ್ರ ಪಾಸಿಟಿವಿಟಿ ಪ್ರಮಾಣ ಶೇ. 1ರಷ್ಟಿತ್ತು. ಜನದಟ್ಟಣೆ ಸೇರದಂತೆ ಜಿಲ್ಲಾಧಿಕಾರಿ ಆದೇಶವಿದೆ. ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ವಿಕೇಂದ್ರೀಕರಣ ವ್ಯವಸ್ಥೆ ಮಾಡಬೇಕಾಗಿತ್ತು. ವಲಯ ಕಚೇರಿಗಳಲ್ಲೇ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಿದ್ದರೆ ಜನದಟ್ಟಣೆ ಆಗುತ್ತಿರಲಿಲ್ಲ. ನಿಯಮ ರೂಪಿಸಿದವರೇ ಜಾರಿಗೊಳಿಸುವಲ್ಲಿ ಎಡವಿದರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ನಾಮಪತ್ರ ಸಲ್ಲಿಕೆಗೆ 8 ದಿನ ಕಾಲಾವಕಾಶ ನೀಡಲಾಗಿದೆ. ಎಲ್ಲರೂ ಕೊನೇ ದಿನ ಬಂದಿದ್ದರಿಂದ ಜನಸಂದಣಿ ಆಗಿತ್ತು. ಆದರೂ ಎಲ್ಲ ಕಡೆ ಕೋವಿಡ್ ನಿಯಮ ಪಾಲನೆ ಆಗಿದೆ. ಕೊಟ್ಟ ದಿನದಿಂದಲೇ ನಾಮಪತ್ರ ಸಲ್ಲಿಸಿದ್ದರೆ ಜನದಟ್ಟಣೆ ಉಂಟಾಗುತ್ತಿರಲಿಲ್ಲ.| ನಿತೇಶ ಪಾಟೀಲ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net