

ಬೆಳಗಾವಿ: ಮಹಾನಗರ ಪಾಲಿಕೆಯ 2022-23ನೇ ಸಾಲಿನ ಬಜೆಟ್‌ಅನ್ನು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬುಧವಾರ ಮಂಡಿಸಿದರು. 6.31 ಲಕ್ಷ ರೂ.ಉಳಿತಾಯದ ಬಜೆಟ್ ಆಗಿದ್ದು, 447.65 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ.
ಬೀದಿ ದೀಪಗಳ ನಿರ್ವಹಣೆಗಾಗಿ 5.50 ಕೋಟಿ ರೂ. ವ್ಯಯಿಸಲು ನಿರ್ಧರಿಸಲಾಗಿದೆ. ನಗರದಾದ್ಯಂತ ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ ಎಲ್.ಇ.ಡಿ. ಯೋಜನೆ ಕೈಗೆತ್ತಿಕೊಳ್ಳಾಗಿದೆ. ರಸ್ತೆ, ಚರಂಡಿ, ಪಾದಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು 5.50 ಕೋಟಿ ರೂ. ನಿಗದಿಪಡಿಸಿದೆ. ತುರ್ತು ಪರಿಸ್ಥಿತಿಯಲ್ಲಿ ನಗರದ ವಿವಿಧ ಅವಶ್ಯಕ ಮೂಲ ಸೌಕರ್ಯಕ್ಕಾಗಿ 5 ಕೋಟಿ ರೂ. ನಿಗದಿಪಡಿಸಲಾಗಿದೆೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿಗೆ 5.09 ಕೋಟಿ ರೂ. ಮೀಸಲಿಡಲಾಗಿದೆ. ಹಿಂದುಳದ ವರ್ಗಗಳ ಕಲ್ಯಾಣ ಅಭಿವೃದ್ಧಿಗೆ 1.69 ಕೋಟಿ 37 ಲಕ್ಷ ರೂ. ಮೀಸಲಿಡಲಾಗಿದೆ. ಅಂಗವಿಕಲರ ಕಲ್ಯಾಣ ಅಭಿವೃದ್ಧಿಗೆ 1.16 ಕೋಟಿ 81 ಲಕ್ಷ ರೂ. ಮೀಸಲಿಡಲಾಗಿದೆ. ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಲಭ್ಯಗಳಾದ ಕುಡಿಯುವ ನೀರು ಸರಬರಾಜು, ದೀಪ ಅಳವಡಿಕೆ, ಶೌಚಗೃಹಗಳ ನಿರ್ಮಾಣಕ್ಕಾಗಿ ಆಯ-ವ್ಯಯದಲ್ಲಿ 2 ಕೋಟಿ ರೂ. ಕಾಯ್ದಿರಿಸಲಾಗಿದೆ. ಡೇ-ನಲ್ಮ ಯೋಜನೆಯಡಿ ನಗರದ ಆರು ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕಾಗಿ ವೆಂಡಿಂಗ್ ರೆನ್ ಹಾಗೂ ಬೀದಿ ವ್ಯಾಪಾರ ಮಾಡುವ ಮಹಿಳೆಯರಿಗೆ ವಿಶ್ರಾಂತಿ ಗೃಹ ನಿರ್ಮಾಣಕ್ಕೆ 5 ಕೋಟಿ ರೂ. ಕಲ್ಪಿಸಲಾಗುವುದು. 50 ಲಕ್ಷ ರೂ.
ವಿಶೇಷ ನಿಧಿ: ಮನೆ ಮನೆಗಳಿಗೆ ಒಣ ಮತ್ತು ಹಸಿ ಕಸ ವಿಂಗಡಣಿಗಾಗಿ ಡಸ್ಟ್‌ಬಿನ್ ಪೂರೈಸಲು 2 ಕೋಟಿ ರೂ. ಮೀಸರಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿನ್ನರ ಉದ್ಯಾನ, ನಾನಾ-ನಾನಿ ಪಾರ್ಕ್ ಅಭಿವೃದ್ಧಿಗೆ 1 ಕೋಟಿ ರೂ. ನಿಗದಿಪಡಿಸಿದೆ. ಮಹಿಳೆಯರಿಗೆ ಪಿಂಕ್ ಶೌಚಗೃಹಗಳಿಗೆ 1 ಕೋಟಿ ರೂ. ಕಾಯ್ದಿರಿಸಲಾಗಿದೆ. ಮಹಿಳೆಯರಿಗೆ ಉತ್ತೇಜನಕ್ಕಾಗಿ ವಿಶೇಷ ನಿಧಿ 50 ಲಕ್ಷ ರೂ.ನಿಗದಿಪಡಿಸಲಾಗಿದೆ.
ಪತ್ರಕರ್ತರ ಕ್ಷೇಮ ನಿಧಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಡೇ-ನಲ್ಮ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಮಹಿಳಾ ನಿರಾಶ್ರಿತ ಕೇಂದ್ರ ನಿರ್ಮಿಸಲು 50 ಲಕ್ಷ ರೂ. ಮೀಸಲಿರಿಸಲಾಗುವುದು. ಪ್ರಮುಖ ವೃತ್ತಗಳಲ್ಲಿ ಪ್ರತಿಮೆ ಸ್ಥಾಪನೆಗೆ 1 ಕೋಟಿ ರೂ. ಕಾಯ್ದಿರಿಸಲಾಗಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿರ್ವಹಣೆಗೆ 50 ಲಕ್ಷ ರೂ. ಕಾಯ್ದಿರಿಸಲಾಗಿದೆ. ಜಿಲ್ಲಾಡಳಿತ ಕಚೇರಿಯ ಆವರಣದಲ್ಲಿ ಮೂಲ ಸೌಕರ್ಯಕ್ಕೆ 50 ಲಕ್ಷ ರೂ. ಮೀಸರಿಸಲಾಗಿದೆ. ಪತ್ರಕರ್ತರ ಕ್ಷೇಮನಿಧಿಗೆ 30 ಲಕ್ಷ ರೂ. ಮರು ನಿಗದಿಪಡಿಸಲಾಗಿದೆ. ವಿವಿಧ ಸ್ಮಶಾನಗಳ ನಿರ್ವಹಣೆಗೆ ಶಾಸಕರುಗಳ ಹಾಗೂ ಸಾರ್ವಜನಿಕರ ಸಲಹೆಯಂತೆ ಪರಿಸರ ಸ್ನೇಹಿ ಬೆರಣಿಗಳಿಂದ ದಹನ ಕ್ರಿಯೆ ನಡೆಸಲು 50 ಲಕ್ಷ ರೂ. ನಿಗದಿಪಡಿಸಲಾಗಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು 50 ಲಕ್ಷ ರೂ. ಮೀಸಲಿರಿಸಲಾಗಿದೆ.
ಪಾಲಿಕೆಯ ಆದಾಯದಲ್ಲಿ ಶೇ.1ರಷ್ಟು ಮೊತ್ತದಲ್ಲಿ 13.61 ಲಕ್ಷ ರೂ. ಕ್ರೀಡೆಗಳಿಗೆ ಮೀಸಲಿಡಲಾಗಿದೆ. ಮಹಾನಗರ ಒಡೆತನದ ಕ್ರೀಡಾ ಚಟುವಟಕೆಗಳಗಾಗಿ ನಿರ್ಮಿಸಲಾದ ಈಜುಕೊಳ, ಬ್ಯಾಡ್ಮಿಂಟನ್ ಹಾಲ್ ಹಾಗೂ ಹೈಟೆಕ್ ಜಿಮ್ ನಿರ್ವಹಣೆಗೆ 50 ಲಕ್ಷ ರೂ. ಮೀಸಲಿಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಂದೇ ಸಲ ಉಪಯೋಗಿಸುವಂತಹ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸ್ವ-ಸಹಾಯ ಸಂಘಗಳ ಮೂಲಕ ಪರ್ಯಾಯ ವಸ್ತುಗಳಾದ ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್‌ಗಳು ಹಾಗೂ ಇತರ ಬ್ಯಾಗಗಳ ತಯಾರಿಕೆಗೆ 10 ಲಕ್ಷ ರೂ. ಮೀಸಲಿರಿಸಿದೆ ಎಂದು ವಿವರಿಸಿದರು. ಎಲ್ಲ ಕಾರ್ಯಕ್ರಮಗಳನ್ನು ನಿಗದಿತ ವೇಳೆಗೆ ಅನುಷ್ಠಾನಗೊಳಿಸುತ್ತೇವೆ ಎಂದರು.
ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆ ಇದೆ. ಈ ಸಮಸ್ಯೆ ನಿವಾರಿಸುವಂತೆ ಬೇಡಿಕೆ ಇತ್ತು. ಅದನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವುದರಿಂದ ಪಾಲಿಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. ಹಿರಿಯ ನಾಗರಿಕರಿಗೆ ಸಂಬಂಧಿಸಿದ ಯೋಜನೆಯನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಲಾಗುವುದು. ಬಾಕಿ ಉಳಿದಿರುವ ತೆರಿಗೆ ವಸೂಲಿ ಮಾಡಲು ಆದ್ಯತೆ ನೀಡಲಾಗುವುದು. ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಹೆಚ್ಚು ಒತ್ತು ಕೊಡಲಾಗುವುದು ಎಂದರು.