ಪಾಲಿಕೆ ಅಧಿಕಾರಿಗಳ ಕಿರುಕುಳ ತಪ್ಪಿಸಲು ಸೂಕ್ತ ಕ್ರಮ: ಶಾಸಕ ನಾಗೇಂದ್ರ ಭರವಸೆ

6
Published on

ಮೈಸೂರು: ಪ್ಲಾಸ್ಟಿಕ್ ನಿಷೇಧ ಹೆಸರಿನಲ್ಲಿ ವರ್ತಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲಾಗುವುದು ಎಂದು ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.


ನಗರದ ಆಲಮ್ಮ ಛತ್ರದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಟ್ರೇಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಷೇಧಿತ ಪ್ಲಾಸ್ಟಿಕ್ ತಡೆಯಲು ನಗರಪಾಲಿಕೆ ಅಧಿಕಾರಿಗಳಿಂದ ವ್ಯಾಪಾರಿಗಳಿಗೆ ಕಿರುಕುಳ ಆಗುತ್ತಿರುವ ಕುರಿತು ಗಮನಕ್ಕೆ ಬಂದಿದೆ. ಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವ್ಯಾಪಾರಿಗಳಿಗೆ ಕಿರುಕುಳ ನೀಡದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.


ವ್ಯಾಪಾರಿಗಳೂ ಮತ್ತು ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದು. ಯಾವುದೇ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು. ಅದನ್ನು ಬಿಟ್ಟು ಕಿರುಕುಳ ನೀಡಬಾರದು. ಅಧಿಕಾರಿಗಳಿಂದ ತಮಗಾಗುತ್ತಿರುವ ಕಿರುಕುಳದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮೈಸೂರಿನ ವ್ಯಾಪಾರಿಗಳು ಮೈಸೂರು ಟ್ರೇಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿಕೊಂಡಿದ್ದು, ಅವರ ಒಗ್ಗಟ್ಟಿನಲ್ಲಿ ಬಲವಿದೆ ಎಂದರು.


ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಅಧಿಕಾರಿಗಳು ವ್ಯಾಪಾರಿಗಳಿಗೆ ಕಿರುಕುಳ ನೀಡುವ ಪ್ರವೃತ್ತಿ ಬಿಡಬೇಕು. ಮೊದಲು ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ನಮ್ಮ ಹೋರಾಟಕ್ಕೆ ಸಂಘ ಬೇಕು. ಸಂಘಟನೆಯಲ್ಲಿ ಬಲ ದೊರೆಯುತ್ತದೆ. ಆ ಶಕ್ತಿ ಸಂಘಟನೆಯಿಂದ ಸಾಧ್ಯ. ಕೋಟ್ಯಂತರ ರೂ. ತೆರಿಗೆ ಕಟ್ಟುವ ಮೂಲಕ ಸರ್ಕಾರಕ್ಕೆ ಸಹಕಾರ ನೀಡುತ್ತಿರುವ ವ್ಯಾಪಾರಿಗಳಿಗೆ ಮೂಲಸೌಕರ್ಯ ಮಾಡಿಕೊಡಬೇಕೇ ಹೊರತು, ಕೇವಲ ದಂಡ ವಸೂಲಿಗೆ ಪಾಲಿಕೆ ಅಧಿಕಾರಿಗಳೂ ನಿಲ್ಲಬಾರದು. ನಮ್ಮ ಹಕ್ಕು ಪಡೆಯಲು ನಮಗೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಮೈಸೂರು ಟ್ರೇಡರ್ಸ್‌ ಸುರಕ್ಷಣಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಪ್ರಶಾಂತ್‌ಗೌಡ ಮಾತನಾಡಿ, ಪ್ಲಾಸ್ಟಿಕ್ ನಿಷೇಧ ಮಾಡಲು ನಮ್ಮ ಅಡ್ಡಿಯಿಲ್ಲ. ಇದಕ್ಕೆ ನಮ್ಮ ಬೆಂಬಲ ಇದೆ. ಕಾನೂನು ಪ್ರಕಾರ ಅಧಿಕಾರಿಗಳು ಕ್ರಮ ವಹಿಸಲಿ. ಆದರೆ, ಅದರ ನೆಪದಲ್ಲಿ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದನ್ನು ಸಹಿಸಲು ಆಗುವುದಿಲ್ಲ ಎಂದರು.


ವರ್ತಕರಿಗೆ ಕಿರುಕುಳ ನೀಡುವುದು ಬೇಡ. ಮೊದಲು ಎರಡು ಮೂರು ಬಾರಿ ನೋಟಿಸ್ ನೀಡಲಿ. ನಂತರ ದಂಡ ಇತ್ಯಾದಿ ಕ್ರಮಕ್ಕೆ ಮುಂದಾಗಲಿ. ಅದು ಬಿಟ್ಟು, ಏಕಾಏಕಿ ದಬ್ಬಾಳಿಕೆ ನಡೆಸುವುದು ಖಂಡನೀಯ. ಆದ್ದರಿಂದ ಈ ರೀತಿ ಅಧಿಕಾರಿಗಳಿಂದ ಆಗುವ ತೊಂದರೆ, ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ವರ್ತಕರ ಹಿತಾಸಕ್ತಿ ಕಾಪಾಡಲು ಸಂಘವನ್ನು ಸ್ಥಾಪಿಸಲಾಗಿದೆ ಎಂದರು.


ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು, ಮೈಸೂರು ಟ್ರೇಡರ್ಸ್‌ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದ ಲೋಗೋ ಬಿಡುಗಡೆ ಮಾಡಿದರು. ಮಾಜಿ ಶಾಸಕ ವಾಸು, ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಮೈಸೂರು ಗ್ರೈನ್ಸ್ ಮರ್ಚೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಆನಂದ್, ಪೆಟ್ರೋಲಿಯಂ ಡೀಲರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಎಸ್.ಕೆ.ದಿನೇಶ್, ಸಂಘದ ಉಪಾಧ್ಯಕ್ಷ ಪ್ರವೀಣಕುಮಾರ್, ಕಾರ್ಯದರ್ಶಿ ರಾಜೇಶ್‌ಕುಮಾರ್, ಪದಾಧಿಕಾರಿಗಳಾದ ಚಂದ್ರಶೇಖರ್, ಬಿ.ಕಾಂತಿಲಾಲ್, ಶಂಕರ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net