

ಮೈಸೂರು: ಸಾರ್ವಜನಿಕರ ಸಮಸ್ಯೆಗಳನ್ನು ಒಂದೇ ಸೂರಿನಡಿ ಬಗೆಹರಿಸಲು ಪ್ರಥಮ ಬಾರಿಗೆ ಕೈಗೊಂಡಿರುವ ‘ಪಾಲಿಕೆ ಅದಾಲತ್’ಗೆ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಾಲಿಕೆ ಮುಖ್ಯ ಕಚೇರಿ ಆವರಣದಲ್ಲಿ ಆರು ದಿನಗಳ ಕಾಲ ಆಯೋಜಿಸಿರುವ ಅದಾಲತ್‌ಗೆ ಸೋಮವಾರ ಬೆಳಗ್ಗೆ ಚಾಲನೆ ದೊರೆಯಿತು. ಆದರೆ, ಪ್ರಚಾರದ ಕೊರತೆಯಿಂದಾಗಿ ಮೊದಲ ದಿನವೇ ಜನರೇ ಇರಲಿಲ್ಲ.
ಉದ್ಘಾಟನೆ ಸಂದರ್ಭದಲ್ಲಿ ಒಂದಿಬ್ಬರು ಮಾತ್ರ ಇದ್ದರು. ಅವರೂ ಅರ್ಜಿ ಸಲ್ಲಿಸಲು ಬಂದಿರಲಿಲ್ಲ. ಕುತೂಹಲದಿಂದ ನೋಡಲು ಬಂದವರು. ಉಳಿದಂತೆ ಇಲ್ಲಿ ಯಾರೂ ಇರಲಿಲ್ಲ. ಪಾಲಿಕೆ ಕಚೇರಿ ಸಿಬ್ಬಂದಿ, ಅಧಿಕಾರಿಗಳು ಮಾತ್ರ ಕಾಣಿಸಿಕೊಂಡರು.
ಪೇಲವ ಎನಿಸಿತು:
ತಾಯಿ ನಿಧನದಿಂದಾಗಿ ಮೇಯರ್ ಶಿವಕುಮಾರ್ ಅದಾಲತ್ ಉದ್ಘಾಟನೆಗೆ ಬರಲಿಲ್ಲ. ಕಾರ್ಯನಿಮಿತ್ತ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಆಗಮಿಸಲಿಲ್ಲ. ಹೀಗಾಗಿ, ಉಪಮೇಯರ್ ಜಿ.ರೂಪಾ ಅವರು ಇದಕ್ಕೆ ಚಾಲನೆ ನೀಡಿದರು. ಆಗ ಜನರ ಕೊರತೆ ತೀವ್ರವಾಗಿ ಕಾಡಿತ್ತು. ಮಾಧ್ಯಮದವರ ಫೋಟೋಕ್ಕೆ ಫೋಸ್ ಕೊಡಲು ಅಲ್ಲಿದ್ದ ಕೆಲವರನ್ನು ಕರೆದು ಅರ್ಜಿ ಸಲ್ಲಿಸುವ ದೃಶ್ಯಗಳು ಕಂಡು ಬಂತು. ಒಟ್ಟಿನಲ್ಲಿ ಮೊದಲ ದಿನವೇ ಪೇಲವ ಎನಿಸಿತು.
ಸಾರ್ವಜನಿಕರ ಕಿಡಿ:
ಅದಾಲತ್‌ನಲ್ಲಿ ಹೊಸ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಹಳೇ ಅರ್ಜಿಗಳ ವಿಲೇವಾರಿ ತಡವಾಗಿದ್ದರೆ ಅಥವಾ ಸಮಸ್ಯೆಯಾಗಿದ್ದರೆ ಮಾತ್ರ ಅಂಥವರು ಅರ್ಜಿ ಸಲ್ಲಿಸಬಹುದಾಗಿತ್ತು. ಇದುವೇ ಅದಾಲತ್ ವಿಫಲವಾಗಲು ಕಾರಣ. ವಲಯವಾರು ಈ ರೀತಿ ಅದಾಲತ್ ಮಾಡಬೇಕು. ಅಲ್ಲಿನ ಸಮಸ್ಯೆಗಳನ್ನು ಅಲ್ಲಿಯೇ ನಿವಾರಣೆ ಮಾಡಬೇಕು. ಅದನ್ನು ಬಿಟ್ಟು ಪಾಲಿಕೆ ಮುಖ್ಯಕಚೇರಿಯಲ್ಲಿ ಇದನ್ನು ನಡೆಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲ್ಲ ಎಂದು ಸಾರ್ವಜನಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ನಾಳೆಯಿಂದಲೇ ಪ್ರಚಾರ:
ನಿರೀಕ್ಷಿತ ಮಟ್ಟದಲ್ಲಿ ಜನರು ಬಂದಿಲ್ಲ. ಪ್ರಚಾರದ ಕೊರತೆಯಿಂದಲೂ ಹೀಗೆ ಆಗಿರಬಹುದು. ಇದನ್ನು ಸರಿಪಡಿಸಲು ಪಾಲಿಕೆ ತ್ಯಾಜ್ಯವಿಲೇವಾರಿ ವಾಹನಗಳ ಮೂಲಕ ನಾಳೆಯಿಂದಲೇ(ನ.15ರಿಂದ) ಮೈಕ್‌ನಲ್ಲಿ ಪ್ರಚಾರ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮೇಯರ್ ಜಿ.ರೂಪಾ ತಿಳಿಸಿದರು.
ಇನ್ನೂ 5 ದಿನ ಇರಲಿದೆ:
ಇನ್ನೂ 5 ದಿನ ಕಾಲ ಅದಾಲತ್ ಇರಲಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ. ಬೆಳಗ್ಗೆ 11ರಿಂದ ಸಂಜೆ 4.30ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಅರ್ಜಿ ವಿತರಣೆ ಹಾಗೂ ಸ್ವೀಕಾರಕ್ಕೆ 5 ಕೌಂಟರ್ ತೆರೆಯಲಾಗಿದೆ. ಪ್ರತಿ ಕೌಂಟರ್‌ಗೆ 4 ಸಿಬ್ಬಂದಿ ನಿಯೋಜಿಸಲಾಗಿದೆ. ಸ್ವೀಕಾರಗೊಳ್ಳುವ ಅರ್ಜಿಯನ್ನು ನ.27ರೊಳಗೆ ವಿಲೇವಾರಿ ಮಾಡಲಾಗುತ್ತದೆ. ವಿಲೇವಾರಿ ಸಾಧ್ಯವಾಗದಿದ್ದರೆ ಹಿಂಬರಹ ಅಥವಾ ಸೂಕ್ತ ಸಮಜಾಯಿಷಿ ನೀಡಬೇಕು. ಹಿಂಬರಹ ತಲುಪದೆ ಇದ್ದವರು ನ.30 ರಂದು ಪಾಲಿಕೆ ಕಚೇರಿ ಆವರಣದಲ್ಲಿ ನಡೆಯುವ ಅಂತಿಮ ದಿನದ ಅದಾಲತ್‌ನಲ್ಲಿ ಅರ್ಜಿ ಸ್ವೀಕೃತಿಯೊಂದಿಗೆ ಹಾಜರಾಗಬಹುದಾಗಿದೆ.
ನಮೂನೆಯಲ್ಲೇ ಅರ್ಜಿ ಸಲ್ಲಿಕೆ:
ಪಾಲಿಕೆಯಿಂದ ನೀಡುವ ನಿಗದಿತ ನಮೂನೆಯಲ್ಲೇ ಅರ್ಜಿ ಸಲ್ಲಿಸಬೇಕು. ಸಂಬಂಧಿಸಿದ ಅಗತ್ಯ ದಾಖಲೆಯನ್ನು ಅರ್ಜಿಯೊಂದಿಗೆ ನೀಡಬೇಕು. ಹೊಸದಾಗಿ ವಾಸಕ್ಕೆ ನಿವೇಶನ ಅಥವಾ ಮನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಸಂಬಂಧ ಆಶ್ರಯ ಯೋಜನೆಯಡಿ ಅಧಿಕೃತ ಪ್ರಕಟಣೆ ಹೊರಡಿಸಿ ಅರ್ಜಿ ಕರೆದಾಗ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ.
ಹಳೇ ಅರ್ಜಿಗೆ ಇಲ್ಲಿ ಪರಿಹಾರ:
ವಲಯ ಕಚೇರಿಗಳಲ್ಲಿ ಅಥವಾ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಯಾವುದೇ ನಾಗರಿಕ ಸನ್ನದುಗಳನ್ನು ಅಥವಾ ಸಾರ್ವಜನಿಕ ಸೇವಾ ಸೌಲಭ್ಯಗಳನ್ನು ಕೋರಿ ಈ ಹಿಂದೆಯೇ ಅರ್ಜಿ ಸಲ್ಲಿಸಿದವರು ಇಲ್ಲಿ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಹಳೇ ಅರ್ಜಿ ವಿಲೇವಾರಿ ಆಗದೆ ಇದ್ದರೆ ಅಥವಾ ಹೊಸ ಸಮಸ್ಯೆಗಳು, ದೂರುಗಳು ಇದ್ದರೆ ಅದಾಲತ್‌ಗೆ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು.
ಯಾವುದಕ್ಕೆ ಅರ್ಜಿ ಸಲ್ಲಿಸಬಹುದು?:
ನಿವೇಶನ ಅಥವಾ ಮನೆ ಖಾತೆ ವರ್ಗಾವಣೆ ಮತ್ತು ನೋಂದಣಿ, ಮನೆ, ನಿವೇಶನದ ಕಂದಾಯ ನಿಗದಿ, ಆಶ್ರಯ ಯೋಜನೆಯಡಿ (ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಕ್ಷೇತ್ರ) ಈಗಾಗಲೇ ಮನೆ ಅಥವಾ ನಿವೇಶನ ಮಂಜೂರಾಗಿದ್ದು, ಸ್ವಾಧೀನಪತ್ರ, ಹಕ್ಕುಪತ್ರ, ಹಕ್ಕು ಖುಲಾಸೆಪತ್ರ, ಖಾತೆ ನೋಂದಣಿ, ವರ್ಗಾವಣೆ ಕೋರಿ ಸಲ್ಲಿಸಿರುವ ಪ್ರಕರಣಗಳು, ಕಟ್ಟಡ ನಿರ್ಮಾಣ ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ(ಸಿಆರ್), ವಾಣಿಜ್ಯ ಪರವಾನಗಿ, ಜಾಹೀರಾತು ಪ್ರಕಟಣೆ ಫಲಕ ಅರ್ಜಿ, ಜನನ ಮತ್ತು ಮರಣ ದೃಢೀಕರಣ, ಇತರ ಸೇವಾ ಸೌಲಭ್ಯವನ್ನು ಕೋರಿ ಅದಾಲತ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಕಂಟ್ರೋಲ್ ರೂಮ್ ಮೊಬೈಲ್ ಸಂಖ್ಯೆ 94498 41196 ಸಂಪರ್ಕಿಸಬಹುದು.