ಪಾಲನೆಯಾಗ್ತಿಲ್ಲ ಸಾಮಾಜಿಕ ಅಂತರ

28CBP2
Published on

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಕರೊನಾ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯು ಒಂದು ಮುಂಜಾಗ್ರತಾ ಕ್ರಮ. ಆದರೆ, ಇದು ಜಿಲ್ಲೆಯಲ್ಲಿ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ.

ಹೌದು! ನಿಯಮ ಉಲ್ಲಂಘನೆ ಆರೋಪಗಳ ನಡುವೆ ಜಿಲ್ಲಾ ಕೇಂದ್ರದ ಅಂಚೆ ಕಚೇರಿ ಎದುರು ಪಿಂಚಣಿ ಹಣ ಪಡೆಯುವ ಸಂದರ್ಭದಲ್ಲಿ ಫಲಾನುಭವಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಜನಧನ್, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ಸೇರಿ ಸಾಮಾಜಿಕ ಭದ್ರತೆಯ ಯೋಜನೆಗಳಡಿ ಪಿಂಚಣಿಯನ್ನು ಇಲ್ಲಿನ ಅಂಚೆ ಕಚೇರಿಯಲ್ಲಿ ನೀಡಲಾಗುತ್ತಿದೆ. ಇದನ್ನು ಪಡೆಯಲೆಂದು ವೃದ್ಧರು, ಅಂಗವಿಕಲರೂ ಸೇರಿ ಅನೇಕರು ಸರದಿಯಲ್ಲಿ ನಿಲ್ಲುತ್ತಿದ್ದು ಜನರ ಜಮಾವಣೆ ಮತ್ತು ಕಿರಿದಾದ ಸ್ಥಳದಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿಲ್ಲ. ಅನೇಕರು ಮಾಸ್ಕ್ ಧರಿಸುತ್ತಿಲ್ಲ. ಇನ್ನು ಹಣದ ಲೆಕ್ಕ, ಬಾಕಿ ಇರುವ ಪಿಂಚಣಿ ಸೇರಿ ನಾನಾ ಹಿನ್ನೆಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಸೋಂಕು ಹರಡುವ ಸಾಧ್ಯತೆ

ಪಿಂಚಣಿ ಪಡೆಯಲು ಅಂಚೆ ಕಚೇರಿಗೆ ಬರುವ ಬಹುತೇಕರು ವೃದ್ಧರು. ಸಾಮಾನ್ಯವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕೆಮ್ಮು, ನೆಗಡಿ ಸೇರಿ ಅನಾರೋಗ್ಯದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಇದೇ ವೇಳೆ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ನಿರ್ಲಕ್ಷ್ಯದಿಂದ ಸೋಂಕಿಗೆ ತುತ್ತಾಗುವುದರ ಜತೆಗೆ ಇತರರನ್ನೂ ಕರೊನಾ ಕೂಪಕ್ಕೆ ಬೀಳಿಸುವುದರಿಂದ ಸೋಂಕಿತರ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಇದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಫಲಾನುಭವಿಗಳ ಮನೆಗಳ ಬಳಿಗೆ ಹೋಗಿ ಹಣ ನೀಡುವ, ಸರದಿ ಸಾಲಿನ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯೂ ಸೇರಿ ಮುಂಜಾಗ್ರತಾ ಕ್ರಮ ಪಾಲಿಸಲು ಸೂಚಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net