

ತೀರ್ಥಹಳ್ಳಿ: ಪಟ್ಟಣದ ಸೊಪ್ಪುಗುಡ್ಡೆ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕುಮಾರ್ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ್ದು, ಅದೇ ಶಾಲೆಯಲ್ಲಿ ಮುಂದುವರಿಯುವಂತೆ ಶಿಕ್ಷಣ ಇಲಾಖೆ ಮಂಗಳವಾರ ಮರು ನಿಯೋಜನೆ ಮಾಡಿದೆ.
ರಾಜ್ಯದ ವಿವಿಧೆಡೆಯಿಂದ ಬಂದಿರುವ ಅಂಗವಿಕಲ ಮಕ್ಕಳು ಈ ಶಾಲೆಯಲ್ಲಿದ್ದಾರೆ. ವ್ಯಾಯಾಮ, ಫಿಸಿಯೋ ಥೆರಪಿ ಮುಂತಾದ ವಿಚಾರಗಳಲ್ಲಿ ತಜ್ಞರಾಗಿದ್ದ ಈ ಶಾಲೆಯ ಶಿಕ್ಷಕ ಕುಮಾರ್ ಇತ್ತೀಚೆಗೆ ನಡೆದ ಕೌನ್ಸೆಲಿಂಗ್‌ನಲ್ಲಿ ಕೋಣಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಗೆ ವರ್ಗಾವಣೆಗೊಂಡಿದ್ದರು. ಅವರನ್ನು ಇಲ್ಲಿಯೇ ಉಳಿಸುವಂತೆ ಆಗ್ರಹಿಸಿ ಅಂಗವಿಕಲ ಮಕ್ಕಳು ಮತ್ತು ಅವರ ಪಾಲಕರು ತಾಲೂಕು ಕಚೇರಿ ಎದುರು ಧರಣಿ ಮಾಡುತ್ತಿದ್ದರು. ಡಿಡಿಪಿಐ ಪರಮೇಶ್ವರಪ್ಪ ಸ್ಥಳಕ್ಕಾಗಮಿಸಿ ಕುಮಾರ್ ಅವರನ್ನು ಮರು ನಿಯೋಜನೆ ಮಾಡಿರುವುದಾಗಿ ತಿಳಿಸಿದರು.
ಶಾಲೆಯಲ್ಲಿರುವ ಎಲ್ಲ್ಲ ಮಕ್ಕಳೂ ಅಂಗವಿಕಲರಾಗಿರುವ ಕಾರಣ ಶಾಲೆಯನ್ನು ವಿಶೇಷ ಚೇತನ ಮಕ್ಕಳ ಶಾಲೆಯೆಂದು ಘೋಷಿಸುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆಯನ್ನು ಶಾಶ್ವತವಾಗಿ ವಿಶೇಷ ಚೇತನ ಮಕ್ಕಳ ಶಾಲೆಯೆಂದೇ ಘೋಷಿಸಬೇಕು ಎಂದು ಸಾರ್ವಜನಿಕರು ಡಿಡಿಪಿಐ ಅವರನ್ನು ಆಗ್ರಹಿಸಿದರು.
ಮಕ್ಕಳ ಆರೈಕೆಗೆ ಈ ಶಾಲೆಯನ್ನೇ ಅವಲಂಬಿಸಿದ್ದು ಮಾತ್ರವಲ್ಲ, ನಾಲ್ಕಾರು ವರ್ಷಗಳಿಂದ ಇಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕುಮಾರ್ ನೀಡುತ್ತಿರುವ ಚಿಕಿತ್ಸೆಯಿಂದ ನಮ್ಮ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಾಲಕರು ತಂದರು.
ಶಿಕ್ಷಕ ಕುಮಾರ್ ವರ್ಗಾವಣೆ ಕುರಿತು ಪಟ್ಟಣದಲ್ಲಿ ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೂ ತಂದಿದ್ದರು. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇವರನ್ನು ಈ ಶಾಲೆಯಲ್ಲಿಯೇ ಉಳಿಸುವಂತೆಯೂ ಮನವಿ ಮಾಡಿದ್ದರು. ಆಗ ಸಚಿವರು ಸಭೆಯಲ್ಲಿದ್ದ ಡಿಡಿಪಿಐ ಅವರಿಗೆ ಈ ಬಗ್ಗೆ ಸೂಚನೆ ನೀಡಿದ್ದರು. ಸದರಿ ಶಿಕ್ಷಕರ ಮರು ನಿಯೋಜನೆ ವಿಳಂಬವಾದ ಹಿನ್ನೆಲೆಯಲ್ಲಿ ಪಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.