ಪಾಲಕರಿಗೆ ಅದ್ದೂರಿ ಸ್ವಾಗತ

8 RON 2
Published on

ರೋಣ: ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಆಗಮಿಸುತ್ತಿದ್ದ ಮಕ್ಕಳ ಪಾಲಕರ ಮುಖದಲ್ಲಿ ಮಂದಹಾಸವಿತ್ತು...ಆರತಿ ಬೆಳಗಿ, ಹೂ ನೀಡಿ, ಹಣೆಗೆ ತಿಲಕವಿಟ್ಟು, ಪುಷ್ಪಾರ್ಚನೆಗೈದು ಸ್ವತಃ ಶಿಕ್ಷಕರೇ ಪಾಲಕರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳುವ ಮೂಲಕ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದರು.

ಇದೆಲ್ಲ ನಡೆದಿದ್ದು ಪಟ್ಟಣದ ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಪಿಐ ಸುನೀಲ ಸೌದಿ, ಭಾರತೀಯ ಸಂಸ್ಕೃತಿ, ಆಚಾರ-ವಿಚಾರ ವಿಶ್ವಮಾನ್ಯವಾಗಿದ್ದು, ಅವುಗಳನ್ನು ಉಳಿಸಿ-ಬೆಳೆಸಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೆಚ್ಚಾಗಿ ಆಕರ್ಷಿತಗೊಳ್ಳುತ್ತಿರುವುದು ದೇಶದ ಸಂಸ್ಕೃತಿ ನಾಶವಾಗಲು ಕಾರಣವಾಗುತ್ತಿದೆ. ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ಶ್ರದ್ಧೆ, ಭಕ್ತಿ, ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ಜಾಗೃತಿ ಮೂಡಿಸುತ್ತಿರುವುದು ಸ್ತುತ್ಯರ್ಹವಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಶಶಿಧರ ದಿಂಡೂರ, ಬಸವರಾಜ ಕಂಠಿ, ವಿಜಯಲಕ್ಷ್ಮೀ ದಿಂಡೂರ, ಶರಣಬಸಪ್ಪ ಗುಡಿಮನಿ, ಇತರರಿದ್ದರು.

ಸೃಷ್ಟಿಯಾಗಿತ್ತು ಹಳ್ಳಿ ವಾತಾವರಣ

ಬಣ್ಣ ಬಣ್ಣದ ಇಳಕಲ್ ಸೀರೆಯುಟ್ಟ ವಿದ್ಯಾರ್ಥಿನಿಯರು, ಧೋತ್ರ (ವಲ್ಲಿ), ನೆಹರು ಶರ್ಟ್ ಧರಿಸಿದ ವಿದ್ಯಾರ್ಥಿಗಳು. ಮಲೆಯಾಳಿ ಶೈಲಿಯಲ್ಲಿ ಬಿಳಿ ಬಾರ್ಡರ್ ಸೀರೆಯುಟ್ಟು ಸೆಲ್ಪಿ ಕ್ಲಿಕ್ಕಿಸುತ್ತಿದ್ದ ವಿದ್ಯಾರ್ಥಿನಿಯರು, ಕಿರೀಟ ತೊಟ್ಟು, ಕೈಯಲ್ಲಿ ತ್ರಿಶೂಲ ಹಿಡಿದು ದುರ್ಗಾದೇವಿಯ ವೇಷ ತೊಟ್ಟು ಬಾಲೆಯರು ಕಂಗೊಳಿಸಿದರು. ಹೀಗಾಗಿ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಗ್ರಾಮೀಣ ಸೊಗಡು ಸೃಷ್ಟಿಯಾಗಿತ್ತು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಫಲಿತಾಂಶಕ್ಕಾಗಿ ಪೋಷಕರು, ಶಿಕ್ಷಕರು, ಓದಿನ ಮೇಲೆ ಒತ್ತಡ ಹಾಕುತ್ತಾರೆ. ಆದರೆ, ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿನ ಜೊತೆ ರೂಢಿ-ಸಂಪ್ರದಾಯ ಉಳಿಸಲು ಹೆಗಲು ಕೊಟ್ಟಿದ್ದಾರೆ. | ಅನಿಲ ವೈದ್ಯ, ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net