

ಕಮಲಾಪುರ: ಮಹಾಗಾಂವ್ ಕ್ರಾಸ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಅಪಹರಣ ಪ್ರಕರಣ ಹೊಸ ಸ್ವರೂಪ ಪಡೆದಿದ್ದು, ಪಾಲಕರಿಂದ ಬೈಗುಳ ತಪ್ಪಿಸಿಕೊಳ್ಳಲು ಬಾಲಕನೇ ಕಿಡ್ನ್ಯಾಪ್‌ನ ಕಟ್ಟು ಕಥೆ ಕಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸರ್ಕಾರಿ ಮಾದರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಶರಣಯ್ಯ ಸಂಗಣ್ಣ (13)ನನ್ನು ಅಪಹರಿಸಲಾಗಿದೆ ಎಂದು ಶುಕ್ರವಾರ ಎಲ್ಲೆಡೆ ಸುದ್ದಿ ಹರಡಿತ್ತು. ಅಲ್ಲದೆ ಪಾಲಕರು ದೂರು ಸಹ ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲೆಡೆ ಅಪಹರಣಕಾರರಿಗಾಗಿ ತೀವ್ರ ಹುಡುಕಾಟ ನಡೆಸಿದರು. ಅಲ್ಲದೆ ಶಂಕಿತ ಓಮ್ನಿ ಕಾರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಬಾಲಕ ಪರಿಶೀಲಿಸಿ ಕಾರು ಇದಲ್ಲ ಎಂದು ಹೇಳಿದ್ದಾನೆ.
ಶನಿವಾರ ಬೆಳಗ್ಗೆ ಬಾಲಕ ಮತ್ತು ಪಾಲಕರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗಿದೆ. ಈ ವೇಳೆ ವಿದ್ಯಾರ್ಥಿ ನಾನು ಶಾಲೆ ತಪ್ಪಿಸಿದ್ದೆ. ಇದು ಮನೆಯವರಿಗೆ ಗೊತ್ತಾದರೆ ಹೊಡೆಯುತ್ತಾರೆ. ಹೀಗಾಗಿ ಪಾಲಕರಿಂದ ಹೊಡಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಕಿಡ್ನಾÈಪ್ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
5 ದಿನದಿಂದ ಶಾಲೆಗೆ ಹೋಗಿರಲಿಲ್ಲ: ವಿದ್ಯಾರ್ಥಿ ಶರಣಯ್ಯ ಐದು ದಿನಗಳಿಂದ ಶಾಲೆಗೆ ಹೋಗದ್ದರಿಂದ ಮನೆಯಲ್ಲಿ ಬೈದಿದ್ದರು. ನಂತರವೂ ಶಾಲೆಗೆ ಚಕ್ಕರ್ ಹಾಕಿದ್ದು, ಮತ್ತೊಮ್ಮೆ ಗದರುತ್ತಾರೆ ಎಂಬ ಭಯದಿಂದ ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿ ಶಾರ್ಪನರ್ ತರುವುದಕ್ಕಾಗಿ ಅಂಗಡಿಗೆ ಹೋಗಿದ್ದೆ ಎಂದಿದ್ದ. ಆದರೆ ವ್ಯಾಪಾರಿಯನ್ನು ಕೇಳಿದ್ರೆ ನಾನು ಶಾರ್ಪನರ್ ಮಾರಲ್ಲ ಎಂದಿದ್ದಾನೆ. ಇನ್ನು ಓಮ್ನಿ ಕಾರ್‌ನಲ್ಲಿ ಅಪಹರಿಸಲಾಗಿದೆ ಎಂದಿದ್ದ. ಆದರೆ ಸಿಸಿ ಕ್ಯಾಮರಾ ಪರಿಶೀಲಿಸಿದರೆ ವಿದ್ಯಾರ್ಥಿ ಹೇಳುವ ಸಮಯದಲ್ಲಿ ಯಾವುದೇ ಓಮ್ನಿ ಸಂಚರಿಸಿಲ್ಲ. ಅಲ್ಲದೆ ನನ್ನ ತಂದೆ ಸ್ನೇಹಿತ ಮನೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದ್ದ. ಆತನನ್ನು ಕೇಳಿದಾಗ, ನಾನು ನಿನ್ನೆ ಹೊಲಕ್ಕೆ ಹೋದವನು ಆಚೆಯೇ ಬಂದಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಯನ್ನು ಮತ್ತೊಮ್ಮೆ ವಿಚಾರಿಸಿದಾಗ ಮನೇಲಿ ಬೈತಾರೆ ಅಂತ ಭಯದಿಂದ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಸುಳ್ಳು ಹೇಳಿರುವುದಾಗಿ ತಿಳಿಸಿದ್ದಾನೆ ಎಂದು ವಿವರಿಸಿದರು.