

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಸ್ಥೆ ಆರಂಭಿಸುವುದು ಮುಖ್ಯವಲ್ಲ. ಸಂಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಬೆಳೆಸುವುದು ಮುಖ್ಯವಾಗಿದೆ. ಹೀಗೆ ಬೆಳೆದು ನಿಂತ ಕ್ಲಾಸಿಕ್ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ತಪೋವನದಲ್ಲಿನ ಕ್ಲಾಸಿಕ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಕ್ಲಾಸಿಕ ಸಂಸ್ಥೆ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಉತ್ತಮ ಭವಿಷ್ಯ ಹೊಂದಲಿ ಎಂದುಕೊಂಡು ಪಾಲಕರು ತ್ಯಾಗ ಮಾಡಿರುತ್ತಾರೆ. ಅದನ್ನು ಎಂದಿಗೂ ಮರೆಯದೆ ತಂದೆ-ತಾಯಿಯನ್ನು ಕಡೆ ಕಾಲದವರೆಗೂ ಜೋಪಾನ ಮಾಡುವುದು ನಮ್ಮ ಕರ್ತವ್ಯ. ಮಕ್ಕಳು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಜೀವನ ಸಾಗಿಸಬೇಕು. ಹೀಗಾಗಿ ಪ್ರತಿ ತರಗತಿಯಲ್ಲಿ 5 ನಿಮಿಷಗಳ ಕಾಲ ಸಂಸ್ಕಾರದ ಬಗ್ಗೆ ಹೇಳುವ ಕೆಲಸವಾಗಬೇಕು ಎಂದರು.
ಸಾಮಾನ್ಯ ರೈತ ಕುಟುಂಬದಿಂದ ಬಂದ ಲಕ್ಷ್ಮಣ ಉಪ್ಪಾರ ಅತ್ಯಂತ ಕಡಿಮೆ ಅವಧಿಯಲ್ಲೇ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತ ಗುರಿ ಇಟ್ಟುಕೊಳ್ಳಬೇಕು. ಸಂಸ್ಥೆಯಲ್ಲಿ ಸೂಕ್ತ ಮಾರ್ಗದರ್ಶನ ದೊರೆಯುತ್ತಿದೆ. ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಾನ್ನಿಧ್ಯ ಹೊಸದುರ್ಗದ ಚಿನ್ಮೂಲಾದ್ರಿ ಸೂರ್ಯಸಿಂಹಾಸನ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಕ್ಲಾಸಿಕ್ ಸಂಸ್ಥೆ ಸಾವಿರಾರು ಜನರಿಗೆ ಉದ್ಯೋಗ, ಶಿಕ್ಷಣ, ಜ್ಞಾನದ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಾದರಿಯಾಗಿದೆ. ಬದುಕಿನಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡು ದೇವರ, ತಂದೆ-ತಾಯಿ, ಸಮಾಜದ ಋಣ ತೀರಿಸಬೇಕು. ತಂದೆ ತಾಯಿಗೆ ಗೌರವ ಕೊಡುವುದು ಹಾಗೂ ಅವರ ಹೆಸರನ್ನು ಬೆಳೆಸಿದಾಗಲೇ ಪಾಲಕರ ಶ್ರಮಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.
ಕ್ಲಾಸಿಕ್ ಸಂಸ್ಥೆ ಸಂಸ್ಥಾಪಕ ಲಕ್ಷ್ಮಣ ಉಪ್ಪಾರ ಮಾತನಾಡಿ, ವ್ಯವಸ್ಥಿತ ಹಾಗೂ ಶಿಸ್ತಿನಿಂದ ಪಾಠ ಮಾಡುವುದೇ ನನ್ನ ಬದ್ಧತೆ. ಸಂಸ್ಥೆಯನ್ನು ಮಾದರಿಯಾಗಿ ಮಾಡಲು ನನ್ನ ಪಾಲಕರ, ಸಹೋದರರ ಆಶೀರ್ವಾದವೇ ಪ್ರೇರಣೆ. ವಿದ್ಯಾರ್ಥಿಗಳ ಸಾಧನೆಯಿಂದಲೇ ಸಂಸ್ಥೆಗೆ ಹೆಸರು ಬರಲಿದೆ. ಸಂಸ್ಥೆ ಸಿಬ್ಬಂದಿಯಿಂದಲೇ ಸಾಧನೆ ಮಾಡಲು ಸಾಧ್ಯವಾಗಿದೆ. ನಾವು ಮಾಡುವ ಕೆಲಸವನ್ನು ಭಕ್ತಿಯಿಂದ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದರು.
ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ, ಕೃವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ ಮಾತನಾಡಿದರು. ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಲಾಸಿಕ್ ಸಂಸ್ಥೆ ಸ್ಮರಣ ಸಂಚಿಕೆ, ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಹೇಮಲತಾ ಹೊರಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಬಲರಾಮ ಲಮಾಣಿ, ಲಿಂಗಣ್ಣ ಗುಂಡಳ್ಳಿ, ವಿಜಯಾನಂದ ಶೆಟ್ಟಿ, ಶ್ರೀಧರ ನಾಡಗೀರ, ಹರ್ಷ ಡಂಬಳ, ಡಾ.ಎಂ.ವೈ. ಸಾವಂತ, ಶಂಕರ ಕುಂಬಿ, ವಿಜಯಾನಂದ ಶೆಟ್ಟಿ, ರೇಣುಕಾ ಉಪ್ಪಾರ, ಸಿದ್ದಪ್ಪ ಉಪ್ಪಾರ, ನಾಗರತ್ನ ದಂಡಿನ, ಆನಂದ ಕುಲಕರ್ಣಿ, ಎಚ್.ಆರ್. ವಸ್ತ್ರದ, ಐ.ಜಿ. ಚೌಗಲಾ, ವಿದ್ಯಾರ್ಥಿಗಳು, ಸಿಬ್ಬಂದಿ, ಇತರರು ಇದ್ದರು.
ಬಸವರಾಜ ಕುಪ್ಪಸಗೌಡರ ಸ್ವಾಗತಿಸಿದರು. ಸ್ವಪ್ನಾ ಉಪ್ಪಿನ ನಿರೂಪಿಸಿದರು.