

ಆಲೂರು: ತಾಲೂಕಿನ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಪಾರ್ವತಮ್ಮ ಬೆಟ್ಟದ ಪಾರ್ವತಿದೇವಿಯ ಜಾತ್ರೆ ಹಾಗೂ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಹೋತ್ಸವವು ಶುಕ್ರವಾರ ಸಂಪನ್ನಗೊಂಡಿತು.
ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ದೈತಾಪುರ ಗ್ರಾಮದ ಬಳಿ ಶ್ರೀ ಪಾರ್ವತಿದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮಹಾಗಣಪತಿ ದೇವರು, ನಾಗದೇವರ ನೂತನ ದೇವರ ಪೂಜಾ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಮೂರು ದಿನಗಳ ಜಾತ್ರಾ ಮಹೋತ್ಸವಕ್ಕೆ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ದರು. ದೇವಾಲಯದಲ್ಲಿ ಹೋಮ, ಅಭಿಷೇಕ, ಕಳಸ ಸ್ಥಾಪನೆ, ದೇವಿಗೆ ವಿಶೇಷ ಅಲಂಕಾರ, ಕೈಂಕರ್ಯಗಳು ಜರುಗಿದವು. ಸುತ್ತಮುತ್ತಲಿನ 48 ಹಳ್ಳಿಗಳ ಗ್ರಾಮಸ್ಥರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.