ತುಮಕೂರು: ಪಾರಿವಾಳ ಹಿಡಿಯುವ ವಿಷಯದಲ್ಲಿ ಸ್ನೇಹಿತರೊಂದಿಗೆ ಗಲಾಟೆಯಾಗಿದ್ದೇ ನೆಪಮಾಡಿಕೊಂಡ 7ನೇ ತರಗತಿ ವಿದ್ಯಾರ್ಥಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಜಯನಗರದಲ್ಲಿ ಶುಕ್ರವಾರ ಬೆಳಗ್ಗೆ ಟನೆ ನಡೆದಿದ್ದು, ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕಿ ಶಂಕುತಲಾ ನಟರಾಜ್ ಅವರ ಒಬ್ಬನೇ ಮಗ ತ್ರಿಶಾಲ್(13) ಮೃತ. ನಗರದ ಸವೋರ್ದಯ ಪ್ರೌಢಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ತ್ರಿಶಾಲ್ ತಾಯಿ ಶಂಕುತಲಾ ಜತೆ ವಿಜಯನಗರದ 2ನೇ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಶುಕ್ರವಾರ ಶಾಲಾ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ನೋಟ್ ಕೂಡ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಪಾರಿವಾಳದ ಬೆಟ್ಟಿಂಗ್ ಹಣಕಾಸು ವಿಚಾರಕ್ಕೆ ಸ್ನೇಹಿತರ ಜತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.