

ಹಳೇಬೀಡು: ಅಧಿಕ ಶ್ರಾವಣ ಮಾಸದ ಪ್ರಯುಕ್ತ ಹಳೇಬೀಡಿನ ರಾಮಮಂದಿರದಲ್ಲಿ ಒಂದು ತಿಂಗಳಿಂದ ಜರುಗಿದ ಧಾರ್ಮಿಕ ಪಾರಾಯಣ ಹಾಗೂ ಭಜನಾ ಕಾರ್ಯಕ್ರಮಗಳು ಬುಧವಾರ ಸಂಜೆ ಸಂಪನ್ನಗೊಂಡವು.
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಮಾರ್ಗದರ್ಶನದಲ್ಲಿ ವಿಶೇಷ ಧಾರ್ಮಿಕ ಪಾರಾಯಣ ಹಾಗೂ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಟ್ಟಣದ ಶಾರದಾ ಶಂಕರ ಮಹಿಳಾ ಮಂಡಳಿಯ ಸದಸ್ಯರು ಶ್ರಾವಣ ಮಾಸದ ಪಾಡ್ಯದಿಂದ ಅಮಾವಾಸ್ಯೆಯವರೆಗೆ ವಾಲ್ಮೀಕಿ ಮಹರ್ಷಿ ವಿರಚಿತ ಬಾಲ ರಾಮಾಯಣ ಹಾಗೂ ಗುರು ಸ್ತೋತ್ರಗಳನ್ನು ನಿತ್ಯ ಪಠಿಸಿದರು. ಬುಧವಾರ ಸಂಜೆ ಶ್ರೀಗಳ ಧ್ಯಾನಶ್ಲೋಕದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ವಿವಿಧ ಕೀರ್ತನೆ ಹಾಗೂ ಭಜನೆಗಳನ್ನು ಹಾಡಿದ ಬಳಿಕ ಪಾರಾಯಣ ಮಾಡಿದ್ದ ಪುಸ್ತಕಗಳನ್ನು ದೇವರ ಮುಂದಿರಿಸಿ ಪೂಜೆ ಸಲ್ಲಿಸಿದರು.
ನಂತರ ಶಾರದಾ ಚಂದ್ರಮೌಳೀಶ್ವರನಿಗೆ ಆರತಿ ಸಲ್ಲಿಸಿ, ಗುರು ಮಂಗಳ ಗೀತೆ ಹಾಡುವದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು. ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮೀ, ಕಾರ್ಯದರ್ಶಿ ರೂಪಾ ಚಿದಂಬರ ನೇತೃತ್ವ ವಹಿಸಿದ್ದರು. ಶಿಲ್ಪಾ ಸುಬ್ರಹ್ಮಣ್ಯ, ಶಾಂತಾ ಮಂಜುನಾಥ್, ಚಂದ್ರಕಲಾ ಭಟ್, ಸುನಂದಮ್ಮ ಇತರರು ಇದ್ದರು.