

ಬಸವಕಲ್ಯಾಣ: ಚಿಂತೆಗಿಂತಲೂ ಚಿಂತನ ದೊಡ್ಡದು, ಶಿವ ಚಿಂತನ, ಶಿವ ಜ್ಞಾನದಿಂದ ನಮ್ಮಲ್ಲಿಯ ಅಜ್ಞಾನ ದೂರವಾಗಿ ಸುಜ್ಞಾನ ಲಭಿಸುತ್ತದೆ ಎಂದು ಹಾರಕೂಡ ಸಂಸ್ಥಾನದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಭಾಗಹಿಪ್ಪರ್ಗಾ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಭೌತಿಕ ಬದುಕಿಗೆ ಲೋಕ ಜ್ಞಾನದ ಜತೆಗೆ ಪಾರಮಾರ್ಥ ಜ್ಞಾನ ಪಡೆದರೆ ಭಕ್ತನ ಜೀವನ ಆನಂದಮಯವಾಗುತ್ತದೆ. ಸದ್ಭಕ್ತಿ ಸುವಿಚಾರ, ಸಂಘಟನೆಯಿAದ ಬಾಳಿದರೆ, ಗ್ರಾಮದಲ್ಲಿ ಅಧ್ಯಾತ್ಮ ಪರಿಸರ ಮೂಡಿ ಜನರ ಬದುಕು ಸನ್ಮಾರ್ಗದೆಡೆಗೆ ಸಾಗಿ, ಶಿವ ಸಾಕ್ಷಾತ್ಕಾರ ಆಗುತ್ತದೆ ಎಂದರು.
ಶಾಸಕ ಶರಣು ಸಲಗರ ಮಾತನಾಡಿ, ಹೆಣ್ಣು ಗಂಡು ಎಂಬ ಭೇದ ಭಾವ ಮಾಡದೆ ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಸಾಧನೆ ಮಾಡಲು ಸಹಕರಿಸಬೇಕು. ಗಿಡಮರಗಳನ್ನೇ ತನ್ನ ಮಕ್ಕಳೆಂದು ಪೋಷಿಸಿದ ಸಾಲುಮರದ ತಿಮ್ಮಕ್ಕನ ಆದರ್ಶ ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದರು.
ಬಾಲಯೋಗಿ ಶರಣ ಮುತ್ಯಾ ನೇತೃತ್ವ ವಹಿಸಿದ್ದರು. ಕಲಕೊರಾ ಗ್ರಾಪಂ ಅಧ್ಯಕ್ಷ ಮಹೇಶ ಬಟಿಗೇರ, ಉಪಾಧ್ಯಕ್ಷೆ ಶ್ರೀದೇವಿ ಹಿರೇಮಠ, ಮುಖಂಡರಾದ ಸದಾನಂದ ಪಾಟೀಲ್, ಝರಪ್ಪ ಮಾಗ, ಜಗದೇವಿ ಕಟ್ಟಿಮನಿ, ಬಸವರಾಜ ಮಾಲಿ ಪಾಟೀಲ್, ವಿಜಯಕುಮಾರ ಹಿರೇಮಠ, ಶರಣಕುಮಾರ ಹಿರೇಮಠ, ಸೂರ್ಯಕಾಂತ ಬಗದುರಗಿ, ಕಲ್ಯಾಣರಾವ ಮಾಲಿ ಪಾಟೀಲ್, ಗೋರಕನಾಥ ಪಾಟೀಲ್, ಅಂಬರೀಶ ಫರತಾಬಾದ್ ಇತರರಿದ್ದರು.
ಗ್ರಾಮಸ್ಥರಿಂದ ಹಾರಕೂಡ ಶ್ರೀಗಳ ತುಲಾಭಾರ ಜರುಗಿತು. ಗ್ರಾಮದ ಹೊರವಲಯದಿಂದ ಮುಖ್ಯರಸ್ತೆ ಮೂಲಕ ವೇದಿಕೆವರೆಗೆ ಹಾರಕೂಡ ಪೂಜ್ಯರ ಅದ್ದೂರಿ ಮೆರವಣಿಗೆ ಜರುಗಿತು. ಗಂಗಾಧರ ಮಿರಕಲ್ ಸ್ವಾಗತಿಸಿದರು. ರಾಜೇಶ್ವರ ಪಾಟೀಲ್ ನಿರೂಪಣೆ ಮಾಡಿದರು. ಬಸಯ್ಯ ಕಂತಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಪ್ರಿಯ ಹಾಗೂ ವರ್ಷ ಭರತನಾಟ್ಯ ಪ್ರಸ್ತುತಪಡಿಸಿದರು.