ಪಾರದರ್ಶಕವಾಗಿ ಪರೀಕ್ಷೆ ನಡೆಸಿ

13 YERRISWAMY 01
Published on

ಬಳ್ಳಾರಿ : ಜಿಲ್ಲೆಯಲ್ಲಿ ಜೂ. 14 ರಿಂದ 22 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ನಡೆಯಲಿದ್ದು, ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಕಚೇರಿಯ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ -2 ಪೂರ್ವ ಸಿದ್ಧತೆ ಕ್ರಮಗಳ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. 20 ಪರೀಕ್ಷಾ ಕೇಂದ್ರಗಳಿಗೆ 20 ಮುಖ್ಯ ಅಧೀಕ್ಷಕರು, 20 ಪರೀಕ್ಷಾ ಕೇಂದ್ರಗಳ ಮಾರ್ಗಗಳಿಗೆ 7 ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಾರ್ಗಾಧಿಕಾರಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಪಡೆದು ಪರೀಕ್ಷಾ ಕೇಂದ್ರಗಳಿಗೆ ವಿತರಿಸಬೇಕು. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಉತ್ತರ ಪತ್ರಿಕೆಗಳನ್ನು ರವಾನಿಸುವ ಸಮಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಮಾರ್ಗಾಧಿಕಾರಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಗೌಪ್ಯ ಸಾಮಾಗ್ರಿ ತಲುಪಿಸಲು 7 ವಾಹನ ಒದಗಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷಾ ವೇಳೆಯಲ್ಲಿ ತುರ್ತು ಚಿಕಿತ್ಸೆ ಸಂಬಂಧ ಅರೆಕಾಲಿಕ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹೇಳಿದರು.
ಗ್ರಾಮೀಣ ಪ್ರದೇಶದಿಂದ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಸಾರಿಗೆ ವ್ಯವಸ್ಥೆ, ಪರೀಕ್ಷಾ ದಿನಗಳಂದು ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಹೇಳಿದರು.
ನೋಂದಾಯಿಸಿದ ವಿದ್ಯಾರ್ಥಿಗಳ ಮಾಹಿತಿ: ಬಳ್ಳಾರಿ ಪೂರ್ವ 3169, ಬಳ್ಳಾರಿ ಪಶ್ಚಿಮ 1191, ಸಂಡೂರು 905, ಸಿರುಗುಪ್ಪ 2326 ಸೇರಿ ಒಟ್ಟು 310 ಹತ್ತನೇ ತರಗತಿಯ ಶಾಲೆಗಳಿಂದ 7,591 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 20 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು, 02 ಅತಿ ಸೂಕ್ಷ್ಮ, ಸೂಕ್ಷ್ಮ-04 ಕೇಂದ್ರಗಳನ್ನಾಗಿ ಗುರುತಿಸಲಾಗಿದೆ, 14 ಸಾಮಾನ್ಯ ಪರೀಕ್ಷಾ ಕೇಂದ್ರಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net