ಪಾರದರ್ಶಕ ಸ್ಪರ್ಧಾತ್ಮಕ ಪರೀಕ್ಷೆಗೆ ಎಡಿಸಿ ತಾಕೀತು

CTD-0000004
Published on

ಚಿತ್ರದುರ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೆ. 29ರಂದು ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಕನ್ನಡದಲ್ಲಿ ನಡೆಯಲಿದ್ದು, ಪಾರದರ್ಶಕ, ನಿಷ್ಪಕ್ಷಪಾತ, ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ, ಸ್ಪರ್ಧಾತ್ಮಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ) ಸಿದ್ಧತೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕನ್ನಡ ಭಾಷಾ ಪರೀಕ್ಷೆಯು ಅರ್ಹತಾ ಪರೀಕ್ಷೆಯಾಗಿದೆ. ಜಿಲ್ಲೆಯ 46 ಪರೀಕ್ಷಾ ಕೇಂದ್ರಗಳಿಂದ 17798 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.
ಪರೀಕ್ಷಾ ಕಾರ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು. ಕೇಂದ್ರಗಳ 200 ಮೀಟರ್ ವ್ಯಾಪ್ತಿ ಸುತ್ತಲೂ ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರದ ವ್ಯಾಪ್ತಿಯ ಜೆರಾಕ್ಸ್ ಅಂಗಡಿ ಹಾಗೂ ಕಂಪ್ಯೂಟರ್ ಇಂಟರ್‌ನೆಟ್ ಕೇಂದ್ರಗಳನ್ನು ಪರೀಕ್ಷೆ ನಡೆಯುವ ದಿನದಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರ ವರೆಗೆ ಮುಚ್ಚುವಂತೆ ಮತ್ತು ಅಭ್ಯರ್ಥಿಗಳು ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ಮಾತನಾಡಿ, ಪರೀಕ್ಷೆಗಳು ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿದೆ. ಮೊಳಕಾಲ್ಮೂರು ಹೊರತುಪಡಿಸಿ ಚಳ್ಳಕೆರೆಯಲ್ಲಿ 6 ಪರೀಕ್ಷಾ ಕೇಂದ್ರಗಳಿಂದ 2352 ಅಭ್ಯರ್ಥಿಗಳು, ಚಿತ್ರದುರ್ಗ ನಗರದಲ್ಲಿ 26-10082.,ಹಿರಿಯೂರು 5-2016., ಹೊಳಲ್ಕೆರೆ 4-1272 ಹಾಗೂ ಹೊಸದುರ್ಗದಲ್ಲಿ 5 ಪರೀಕ್ಷಾ ಕೇಂದ್ರಗಳಿಂದ 2076 ಅಭ್ಯರ್ಥಿಗಳಿದ್ದಾರೆ. ಎಲ್ಲ ಕೇಂದ್ರಗಳಿಗೂ ಬಂದೋಬಸ್ತ್ ಅಗತ್ಯವಿದೆ ಎಂದರು.
ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಡಿಡಿಪಿಐ ಎಂ.ಆರ್. ಮಂಜುನಾಥ್, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net