

ಚಾಮರಾಜನಗರ: ಯಾವುದೇ ಸಂಘಟನೆ ಯಶಸ್ಸು ಸಾಧಿಸಬೇಕಾದರೆ, ಅದರ ಚಟುವಟಿಕೆಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅಗತ್ಯವಾಗಿದೆ ಎಂದು ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.
ನಗರದ ಶ್ರೀಸಿದ್ಧಮಲ್ಲೇಶ್ವರಸ್ವಾಮಿ ವಿರಕ್ತ ಮಠದ ಅನುಭವ ಮಂಟಪದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ರಜತ ಮಹೋತ್ಸವ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮತ್ತು ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಸಂಗಮ ಗೃಹ ನಿರ್ಮಾಣ ಸಹಕಾರ ಸಂಘಗಳು ಸಹಮತದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಂಡು ಸಾಗುತ್ತಿದೆ. ಈ ಸಂಘಗಳು ಇನ್ನಿತರೆ ಸಂಘಗಳಿಗೆ ಮಾದರಿಯಾಗಿದೆ. ಪ್ರಸ್ತುತ ಚುನಾವಣೆಗಳ ಪರಿಸ್ಥಿತಿಯನ್ನು ಅವಲೋಕಿಸುವ ಹೊತ್ತಿನಲ್ಲಿ, ಯಾವುದೇ ಚುನಾವಣೆಗಳು ನಡೆಯದೇ ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಸಮುದಾಯದ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.
ನೌಕರರ ಕ್ಷೇಮಾಭಿವೃದ್ಧಿ ಸಂಘ 25 ವರ್ಷಗಳಿಂದಲೂ ಮೌಲ್ಯಯುತವಾದ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ನಿವೇಶನ ನೀಡುವುದು, ಸಾಲ ಮಂಜೂರು, ಶರಣ ಚಿಂತನೆಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಜಾಗೃತಿಯನ್ನು ಮೂಡಿಸುವ ಹಾಗೂ ಇನ್ನಿತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸಂಘದ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಸಂಘಟನೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಇಲ್ಲದೇ ಹಲವಾರು ಸಂಘಗಳು ವೈಲ್ಯ ಅನುಭವಿಸುತ್ತಿವೆ. ಈ ನಡುವೆ ಸಂಘನೆಯ ಯಶಸ್ಸಿನ ಜತೆಗೆ ಧಾರ್ಮಿಕ ಪ್ರಜ್ಞೆ ಹಾಗೂ ನಮ್ಮ ಶರಣ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವ ಕೆಲಸವನ್ನು ಸಂಘ ಮಾಡುತ್ತಿದೆ. ಇದೇ ಹಾದಿಯಲ್ಲಿ ಸಂಘ ಶಾಶ್ವತವಾಗಿರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮರಿಯಾಲದ ಶ್ರೀಮುರುಘ ರಾಜೇಂದ್ರಸ್ವಾಮಿ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರಯ್ಯ, ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಗೌರಿಶಂಕರ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್.ಮುದ್ದು ಬಸವಣ್ಣ ಹಾಗೂ ಇತರರು ಉಪಸ್ಥಿತರಿದ್ದರು.
ಸಾರ್ಥಕತೆಯ ಹೆಜ್ಜೆ ಗುರುತು:
ಜಿಲ್ಲೆಯಲ್ಲಿ 1999 ರಂದು ಸುತ್ತೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಪ್ರಾರಂಭವಾದ ಸಂಘವು ಅವರ ನೇತೃತ್ವದಲ್ಲಿಯೇ ರಜತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಸಾರ್ಥಕತೆಯ ಹೆಜ್ಜೆ ಗುರುತಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಬಣ್ಣಿಸಿದರು. ಪ್ರಸ್ತುತ ಸಂದರ್ಭದಲ್ಲಿ ಒಂದು ಸಂಘವನ್ನು ಸ್ಥಾಪಿಸಿ ಮುನ್ನೆಡೆಸುವಲ್ಲಿ ಸಾಕಷ್ಟು ಸವಾಲುಗಳಿವೆ. ಸಾಕಷ್ಟು ಒತ್ತಡ ಮತ್ತು ಸಂಘರ್ಷದ ನಡುವೆ 25 ವರ್ಷಗಳ ಕಾಲ ಯಶಸ್ವಿಯಾಗಿ ಸಂಘವನ್ನು ಮುನ್ನಡೆಸುವಲ್ಲಿ ಸುತ್ತೂರು ಶ್ರೀಗಳ ಆಶೀರ್ವಾದ ಬಹುಮುಖ್ಯವಾಗಿದೆ. ಜಿಲ್ಲೆಯಲ್ಲಿ ಸಂಘದ ಪದಾಧಿಕಾರಿಗಳು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತನ್ನದೇಯಾದ ಛಾಪನ್ನು ಮೂಡಿಸಿದ್ದಾರೆ. ನಿರಂತರ ಪ್ರಯತ್ನ, ಧಾರ್ಮಿಕ ತಳಹದಿ, ಸೇವಾ ಮನೋಭಾವ, ಸಂಘಟನೆಯ ಶಕ್ತಿಯೊಂದಿಗೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸಾಗುವ ಸಂಘಟನೆಗಳು ಯಶಸ್ಸನ್ನು ಸಾಧಿಸುತ್ತದೆ. ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ರಜತ ಮಹೋತ್ಸವ ಆಚರಿಸಿಕೊಂಡು, ಸಂಘಕ್ಕೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಿರುವುದು ಮಾದರಿಯ ಕೆಲಸವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬೆಳ್ಳಿ ಮಹೋತ್ಸವದಲ್ಲಿ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅದಲ್ಲದೇ ಜಿಲ್ಲಾ ಮಟ್ಟದ ಭಜನಾ ಮೇಳದಲ್ಲಿ ವಿಜೇತರಾದ ಪುರು ಮತ್ತು ಮಹಿಳಾ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮೂರು ಸಂಘಗಳ ಪೂರ್ವಾಧ್ಯಕ್ಷರು ಹಾಗೂ ಸಂಘದ ಏಳಿಗೆಗೆ ದುಡಿದ ಹಿರಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಮುದಾಯ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಂತಾಗಿದೆ. ಸುಮಾರು 25 ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮಹಾಮನೆ ಕಟ್ಟಡವನ್ನು ನಿರ್ಮಾಣ ಮಾಡುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.
-ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕ, ಗುಂಡ್ಲುಪೇಟೆ
ಸಂಘ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೇ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ರಜತ ಮಹೋತ್ಸವ ಆಚರಣೆ ವರ್ಷದಲ್ಲಿ 25 ಗ್ರಾಮಗಳಲ್ಲಿ ಊರಿಂದೂರಿಗೆ ಶರಣ ಸಂದೇಶ, ಜಿಲ್ಲಾ ಮಟ್ಟದ ಭಜನಾ ಮೇಳ, ರಕ್ತದಾನ ಶಿಬಿರ, ಗ್ರಂಥಾಲಯ ವಿಸ್ತರಣೆ, ಮಹಾಮನೆ ನವೀಕರಣ ಹಾಗೂ ಇನ್ನಿತರೆ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಂದು ಕಾರ್ಯಕ್ರಮಗಳು ಶ್ರೀಗಳ ಆಶೀರ್ವಾದದಿಂದ ಯಶಸ್ವಿಯಾಗಿ ನಡೆದಿದೆ.
-ಸಿದ್ಧಮಲ್ಲಪ್ಪ, ಅಧ್ಯಕ್ಷ, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಚಾಮರಾಜನಗರ