

ಬೀದರ್: ಜನತೆ ಪಾರಂಪರಿಕ ವೈದ್ಯ ಪದ್ಧತಿಯ ಮೂಲಕ ಚಿಕಿತ್ಸೆ ಪಡೆಯಲು ಮುಂದಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ವೃದ್ಧಿಗೆ ಇದು ಸಂಜೀವಿನಿಯಾಗಿದೆ ಎಂದು ಪಾರಂಪರಿಕ ವೈದ್ಯರೂ ಆದ ಸಾಹಿತಿ ನಿರಹಂಕಾರ ಬಂಡಿ ಹೇಳಿದರು.
ನಗರದಲ್ಲಿ ಮಂಗಳವಾರ ಆಯೋಜಿಸಿದ ಜಾನಪದ ಜಗಲಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಪಾರಂಪರಿಕ ವೈದ್ಯ ಪದ್ಧತಿ ಹುಟ್ಟಿದ್ದೇ ಪ್ರಕೃತಿಯಲ್ಲಿ. ಮನೆ ಔಷಧ ಮೂಲಕ ವಿವಿಧ ರೋಗಗಳಿಂದ ಪರಿಹಾರ ಪಡೆಯಬಹುದು. ಎಲ್ಲ ಪದ್ಧತಿಗಳಿಗೂ ಮೂಲ ಬೇರು ಪಾರಂಪರಿಕ ವೈದ್ಯ ಪದ್ಧತಿ. ಸ್ಥಳೀಯವಾಗಿ ದೊರೆಯುವ ಸಸ್ಯ ಸಂಪತ್ತಿನಿಂದ ಆರೋಗ್ಯ ರಕ್ಷಣೆ ಸಾಧ್ಯ. ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವವೇ ಭಾರತದ ಕಡೆಗೆ ಮತ್ತೆ ತಿರುಗಿ ನೋಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ವಿಜಯಕುಮಾರ ಪಾಟೀಲ್ ಮಾತನಾಡಿ, ನಶಿಸುತ್ತಿರುವ ಜಾನಪದ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವುದು ಅಗತ್ಯವಿದೆ. ಜಾನಪದ ಸಾಹಿತ್ಯದಲ್ಲಿ ನೀತಿ, ಮೌಲ್ಯಗಳಿವೆ. ಅವುಗಳನ್ನು ಯುವಕರಿಗೆ ತಿಳಿಸಬೇಕಿದೆ. ಆಧುನಿಕ ಸಂಸ್ಕೃತಿ ಮಕ್ಕಳಿಗೆ ಹಾಳು ಮಾಡುತ್ತಿದೆ. ಪ್ರಾಥಮಿಕ ಹಂತದಿಂದಲೇ ಜಾನಪದ ಬೋಧನೆ ಬೇಕಿದೆ ಎಂದರು.
ಜಾಗೃತಿ ಸಮಿತಿ ಸದಸ್ಯ ಶಿವಯ್ಯಾ ಸ್ವಾಮಿ ಉದ್ಘಾಟಿಸಿದರು. ಪ್ರಮುಖರಾದ ರೇವಣಪ್ಪ ಮೂಲಗೆ ಮಾತನಾಡಿದರು. ರಘುನಾಥ ಪಾಂಚಾಳ, ವಿಶ್ವನಾಥ ವಿಶ್ವಕರ್ಮ, ಸೋಮೇಶ್ವರಿ ಬುಡ್ಡನವರ್, ಪವಿತ್ರಾ, ಶಿವಲೀಲಾ ಅವರು ಜಾನಪದ ಗಾಯನ, ಸಿದ್ಧಲಿಂಗ ಮಿಮಿಕ್ರಿ ನಡೆಸಿಕೊಟ್ಟರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಸುನಿತಾ ಕೂಡ್ಲಿಕರ್ ಸ್ವಾಗತಿಸಿದರು. ಡಾ.ಮಹಾನಂದಾ ಮಡಕಿ ನಿರೂಪಣೆ ಮಾಡಿದರು. ಮೀರಾ ಖೇಣಿ ವಂದಿಸಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಕರ್ನಾಟಕ ಸಾಹಿತ್ಯ ಸಂಘದಿಂದ ಕಾರ್ಯಕ್ರಮ ನಡೆಯಿತು.